ಸುಳ್ಯ:ಕಳೆದ ಕೆಲವು ವಾರಗಳಿಂದ ಸುಳ್ಯದಲ್ಲಿ ಎರಡು ದಿನ ಪೂರ್ತಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ಈ ಹಿಂದೆಲ್ಲಾ ವಾರದಲ್ಲಿ ಒಂದು ದಿನ ವಿದ್ಯುತ್ ಕಡಿತ ಮಾಡಲಾಗುತ್ತಿತ್ತು. ಅಂದರೆ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ವಾರದ ಒಂದು ದಿನ ಕಡಿತ ಮಾಡುತ್ತಾರೆ. ಆದರೆ ಇತ್ತೀಚೆಗೆ ಮತ್ತೊಂದು ದಿನ
ವಿದ್ಯುತ್ ಕಡಿತ ಮಾಡಲಾಗುತ್ತದೆ. ಎರಡು ದಿನ ಪದೇ ಪದೇ ವಿದ್ಯುತ್ ಇರುತ್ತದೆ. 33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ರೀತಿ ಕಡಿತ ಮಾಡಲಾಗುತ್ತದೆ. ಈ ರೀತಿ ದ್ವಿಪಥ ಕಾಮಗಾರಿ ಕೈಗೊಂಡರೆ ಸುಳ್ಯಕ್ಕೆ ಏನು ಪ್ರಯೋಜನ ಎಂಬುದರ ಬಗ್ಗೆ ಮೆಸ್ಕಾಂ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.
ಇದೀಗ ಮಾಡಾವಿನಿಂದ ಏಕ ಪಥದಲ್ಲಿ ಕಾವು ಹಾಗೂ ಸುಳ್ಯಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ. ಇದೀಗ ದ್ವಿಪಥ ಕಾಮಗಾರಿ ನಡೆದರೆ ಮಾಡಾವು- ಕಾವು ಹಾಗೂ ಮಾಡಾವು- ಸುಳ್ಯ ಪ್ರತ್ಯೇಕ ಲೈನ್ಗಳ ಮೂಲಕ ವಿದ್ಯುತ್ ಸರಬರಾಜು ಆಗಲಿದೆ. ಈಗ ಸುಳ್ಯಕ್ಕೆ 19 ಮೆಗಾ ವ್ಯಾಟ್ ವಿದ್ಯುತ್ ಸುಳ್ಯಕ್ಕೆ ಬರುತ್ತದೆ, ಪ್ರತ್ಯೇಕ ಲೈನ್ ಆದರೆ ಸುಳ್ಯಕ್ಕೆ 25 ಮೆಗಾ ವ್ಯಾಟ್ ವಿದ್ಯುತ್ ದೊರೆಯಲಿದೆ. ವೋಲ್ಟೇಜ್ ಕೂಡ ಹೆಚ್ಚು ದೊರೆಯಲಿದ್ದು 30 ಕೆವಿ ವೋಲ್ಟೇಜ್ ಇದ್ದದು 32 ಕೆವಿ ವೋಲ್ಟೇಜ್ ದೊರೆಯಲಿದೆ. ಇದರಿಂದ
ಸುಳ್ಯದಲ್ಲಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದು ಕಡಿಮೆಯಾಗಬಹುದು ಎಂದು ಮಾಹಿತಿ ನೀಡಿದ್ದಾರೆ ಮೆಸ್ಕಾಂ ಇಂಜಿನಿಯರ್ ಸುಪ್ರೀತ್. ಇನ್ನು ಕೆಲವೇ ವಾರದಲ್ಲಿ ದ್ವಿಪಥ ಕಾಮಗಾರಿ ಪೂರ್ತಿಯಾಗಲಿದೆ. ಬಳಿಕ ವಾರದ ಎರಡು ದಿನ ವಿದ್ಯುತ್ ಕಡಿತ ಮಾಡಲಾಗುವುದಿಲ್ಲ ಎಂದು ಸುಪ್ರಿತ್ ಹೇಳುತ್ತಾರೆ.