ಬೆಳ್ತಂಗಡಿ:ಜಾನಪದ ಸಂಗತಿಗಳು ಸದಾ ಕುತೂಹಲಗಳನ್ನು ಪೂರ್ಣವಾಗಿ ಬಿಟ್ಟು ಕೊಡದೇ ಇರುವುದರಿಂದ ಅವು ಇಂದಿಗೂ ಒಂದಷ್ಟು ಜೀವಂತವಾಗಿ ಇವೆ.ಡಾ.ಸುಂದರ ಕೇನಾಜೆಯವರ ನಿರ್ದೇಶನದ ತುಳು ಸಾಕ್ಷ್ಯಚಿತ್ರ ಪುರ್ಸ ಕಟ್ಟುನ ಕೂಡ ತನ್ನೊಳಗೆ ಕುತೂಹಲವನ್ನು ಇರಿಕೊಂಡೇ ರಚನೆಯಾಗಿದೆ. ಆದ್ದರಿಂದ ಇದು ಕೂಡ ಜೀವಂತವಾಗಿ ನಮ್ಮ ಮುಂದೆ ಇರಲಿದೆ ಎಂದು ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು. ಅವರು
ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಇವರ ಸಹಕಾರದಿಂದ ನಿರ್ಮಿಸಿದ ತುಳುವಿನ ಸಂಶೋಧನಾತ್ಮಕ ಸಾಕ್ಷ್ಯಚಿತ್ರ ಪುರ್ಸ ಕಟ್ಟುನ ಇನಿ- ಕೋಡೆ – ಎಲ್ಲೆ” ಇದನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಾಮಾನ್ಯವಾಗಿ ಸಾಕ್ಷ್ಯಚಿತ್ರಗಳು ವಿದ್ವಾಂಸರ ಮಾತಿಗೆ ಹೆಚ್ಚು ಮನ್ನಣೆಯನ್ನು ಕೊಡುತ್ತದೆ. ಆದರೆ ಈ ಸಾಕ್ಷ್ಯಚಿತ್ರ ವಿದ್ವಾಂಸರಷ್ಟೇ ಕಲಾವಿದರ ಮಾತಿಗೂ ಮನ್ನಣೆ ನೀಡಿದೆ. ವಿಶ್ಲೇಷಣೆ ಮತ್ತು ಮನರಂಜನೆ ಇವೆರಡನ್ನು ಸಮಾನವಾಗಿ ಬೆರೆಸಿರುವ ಈ ಸಾಕ್ಷ್ಯಚಿತ್ರ ಹೊಸತನದಿಂದ ಕೂಡಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ನ ಭರತೇಶ್ ಅಲಸಂಡೆಮಜಲು ಹಾಗೂ ಡಾ.ವಿಶ್ವನಾಥ ಬದಿಕಾನ ಇವರು ನಿರ್ಮಾಪಕರಾಗಿ ತಯಾರಿಸಿರುವ ಈ ಸಾಕ್ಷ್ಯಚಿತ್ರದ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಂಬಯಿ ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ್ ಮಾತನಾಡಿ ಇಂತಹಾ ಕೆಲಸಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಾದ ಅನಿವಾರ್ಯ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ವಹಿಸಿದ್ದರು .
ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ನ ಅಧ್ಯಕ್ಷ ಡಾ.ವಿಶ್ವನಾಥ ಬದಿಕಾನ ಪ್ರಾಸ್ತಾವಿಕ ಮಾತನಾಡಿದರು. ಸಾಕ್ಷ್ಯಚಿತ್ರಕ್ಕೆ ಚಿತ್ರಕತೆ, ಹಿನ್ನಲೆ ಧ್ವನಿ ನೀಡಿ ನಿರ್ದೇಶಿಸಿದ ಡಾ.ಸುಂದರ ಕೇನಾಜೆ ನಿರ್ದೇಶಕನ ನೆಲೆಯಲ್ಲಿ ಮಾತನಾಡಿದರು. ಸಾಕ್ಷ್ಯಚಿತ್ರದ ಪ್ರದರ್ಶನದ ನಂತರ ಅದರ ಕುರಿತು ಸಂವಾದ ನಡೆಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಡಾ.ಸುಂದರ ಕೇನಾಜೆಯವರನ್ನು ವಿಕಿಪೀಡಿಯ ವತಿಯಿಂದ ಸನ್ಮಾನಿಸಲಾಯಿತು. ವಾಣಿ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿದರು.
ವಿಕಿಪೀಡಿಯ ಬಳಗದ ಡಾ.ಕಿಶೋರ್ ಕುಮಾರ್ ಶೇಣಿ ವಂದಿಸಿದರು. ಸಹ ಪ್ರಾಧ್ಯಾಪಕ ಡಾ.ದಿವ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.
ಕುಣಿತದಲ್ಲಿ ಭಾಗವಹಿಸಿದ ಬೆಳ್ತಂಗಡಿ ಭಾಗದ ಅನೇಕ ಕಲಾವಿದರು, ಹಿರಿಯರು, ಕುಟುಂಬಗಳ ಮುಖ್ಯಸ್ಥರು ಹಾಗೂ ವಿಕಿಪೀಡಿಯ ಗ್ರೂಪ್ ನ ಸದಸ್ಯರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೈಸೂರಿನ ಕನ್ನಡಿ ಕ್ರಿಯೇಷನ್ ತಂಡ ಬೆಳ್ತಂಗಡಿ ಪರಿಸರದಲ್ಲಿ ಒಂದು ವಾರಗಳ ಕಾಲ ಚಿತ್ರೀಕರಣ ನಡೆಸಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಿರಿಸಿದ್ದು, ಕರಾವಳಿಯ ಹಿರಿಯ ವಿದ್ವಾಂಸರು, ಕುಣಿತದ ಕಲಾವಿದರು ಹಾಗೂ ವಿಭಿನ್ನ ಕುಣಿತಗಳನ್ನು ಒಳಗೊಂಡು ಅನೇಕ ಹೊಸ ವಿಚಾರಗಳನ್ನು ಇದರಲ್ಲಿ ಪ್ರಸ್ತುತಪಡಿಸಲಾಗಿದೆ. ಗುರು ಪ್ರಸಾದ್ ಸ್ವಾಮಿ ಹಿರೇಮಠ ಮತ್ತು ತಂಡದ ಛಾಯಾಗ್ರಹಣ, ರಂಜಿತ್ ಸೇತು ಮೈಸೂರುರವರ ಸಂಕಲನ, ದೀಪು ನಾಯರ್ ಮೈಸೂರುರವರ ಸಂಗೀತ ಹಾಗೂ ಡಾ.ಗಿರೀಶರವರ ಇಂಗ್ಲೀಷ್ ಉಪಶೀರ್ಷಿಕೆ, ದಿನೇಶ್ ಕುಕ್ಕುಜಡ್ಕರ ರೇಖಾಚಿತ್ರಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ.
ಬಿಡುಗಡೆಗೊಂಡ ಈ ಸಾಕ್ಷ್ಯಚಿತ್ರವು ವಿಕಿಮೀಡಿಯ ಮತ್ತು ಯೂಟ್ಯೂಬ್ ಗಳಲ್ಲಿ ಲಭ್ಯವಾಗಲಿದೆ.