ಸುಳ್ಯ: ಸುಳ್ಯ ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಬರ ಎದುರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೀರಿನ ಸಮಸ್ಯೆ ಎದುರಾಗುವ ಸ್ಥಳಗಳನ್ನು ಪತ್ತೆ ಹಚ್ಚಿ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಕಡೆ ಕ್ರಿಯಾ
ಯೋಜನೆ ರೂಪಿಸಿ ಟೆಂಡರ್ ಮಾಡಿಕೊಳ್ಳಬೇಕು ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಚರ್ಚೆ ನಡೆಯಿತು. ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಜಲಜೀವನ್ ಮಿಷನ್ನವರೇ ಮಾಡುವುದು. ಮೆಸ್ಕಾಂ ಸಂಪರ್ಕ ನೀಡುವುದು ಅಲ್ಲಾ ಎಂದು ಮೆಸ್ಕಾಂ ಇಂಜಿನಿಯರ್ಗಳು ಹೇಳಿದರು. ಸಂಪರ್ಕ ನೀಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ತಿಳಿಸಿದರು.
ಸಮಸ್ಯೆ ಇಲ್ಲಾ ಎಂದು ಸುಮ್ಮನೆ ಹೇಳಬೇಡಿ-ಸರಿಯಾದ ವರದಿ ಕೊಡಿ
ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ನಡೆದಾಗ ಕೆಲವು ಪಂಚಾಯತ್ ಅಧಿಕಾರಿಗಳು ಸಮಸ್ಯೆ ಇಲ್ಲಾ ಎಂದು ಉತ್ತರಿಸಿದಾಗ ಗರಂ ಆದ ಶಾಸಕಿ ಭಾಗೀರಥಿ ಮುರುಳ್ಯ
ಸಮಸ್ಯೆ ಇಲ್ಲಾ ಎಂದು ಸುಮ್ಮನೆ ಹೇಳಬೇಡಿ. ಸಮಸ್ಯೆ ಇಲ್ಲಾ ಎಂದು ನೀವು ಹೇಳಿಯೇ ನಮ್ಮ ತಾಲೂಕು ಅಭಿವೃದ್ಧಿಯಾಗದೆ ಉಳಿದಿರುವುದು ಮತ್ತು ಅನುದಾನ ಕಡಿಮೆ ಬರುತಿರುವುದು. ನಿಮ್ಮ ವರದಿಯ ಆಧಾರದಲ್ಲಿ ಅನುದಾನ ಬರುತ್ತದೆ. ಆದುದರಿಂದ ಸಮಸ್ಯೆ ಇಲ್ಲಾ ಎಂದು ಸುಮ್ಮನೆ ಕೂರುವುದಲ್ಲ. ಸರಿಯಾಗಿ ಪರಿಶೀಲನೆ ನಡೆಸಿ ವರದಿ ಕೊಡಿ, ಅನುದಾನ ತರಿಸುವ ಪ್ರಯತ್ನ ನಡೆಸುವ ಎಂದು ಹೇಳಿದರು. ಕಾಲೊನಿಗಳು, ಶಾಲೆ, ಗೋಶಾಲೆ, ತೋಟಗಾರಿಕೆ, ಕೈಗಾರಿಕೆ, ಜನ ವಸತಿ, ಕಚೇರಿ ಹೀಗೆ ಎಲ್ಲಾ ಕಡೆಯಲ್ಲಿಯೂ ಎದುರಾಗಬಹುದಾದ ನೀರಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕರು ಸೂಚಿಸಿದರು. ಜಾನುವಾರುಗಳಿಗೆ ಮೇವು, ನೀರು ಮತ್ತಿತರ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ತಹಶೀಲ್ದಾರ್ ಜಿ. ಮಂಜುನಾಥ್ ತಾಲೂಕು ಪಂಚಾಯತ್, ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಮ್ಯಾನೇಜರ್ ಹರೀಶ್, ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಪಿಡಿಒ, ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.