ಸುಳ್ಯ:ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ಸ್, ಸುಳ್ಯ ಕ್ಷೇತ್ರ ಸಮಿತಿ ಮತ್ತು ಸಮಿತಿಯ ಆರು ವಲಯಗಳ ವತಿಯಿಂದ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಶನಿವಾರ ಟೈಲರ್ಸ್ ಡೇ ಆಚರಣೆ, ಯೇನೆಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ್ರ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ, ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಯಾಗಿ
ಭಾಗವಹಿಸಿ ಮಾತನಾಡಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ‘ಟೈಲರ್ಗಳು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಇಂದು ಅದೆಷ್ಟೋ ಮಂದಿಗೂ ಉದ್ಯೋಗವನ್ನೂ ನೀಡುತ್ತಿದ್ದಾರೆ ಎಂದ ಅವರು ಸಂಘಟನೆ ಮೂಲಕ ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ, ರಕ್ತದಾನ ಶಿಬಿರದಂತಹ ಸಮಾಜಮುಖಿ ಕೆಲಸ ಮಾಡುವ ಮೂಲಕ ಉತ್ತಮ ಕೆಲಸ ನಡೆದಿದೆ ಎಂದರು.
ಸುಳ್ಯ ಕ್ಷೇತ್ರದ ಆರು ವಲಯಕ್ಕೆ ತಲಾ ಒಂದೊಂದು ಹೊಲಿಗೆ ಯಂತ್ರವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಉದ್ಯಮಿ ಪಿ.ಬಿ.ಸುಧಾಕರ ರೈ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಸುಳ್ಯ ಕೆಎಸ್ಟಿಎ ಅಧ್ಯಕ್ಷ ರವೀಂದ್ರ ಡಿ.ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕರ್ಯದರ್ಶಿ ವಿಜಯ್ ಕೆ.ಎಂ., ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಉಪಾಧ್ಯಕ್ಷ ಕೆ.ಲಿಗೋಧರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ, ಖಜಾಂಜಿ ರಮೇಶ್ ತೊಡಿಕಾನ, ಕನ್ನಡಕ ಪ್ರಾಯೋಜಕರಾದ ದೃಷ್ಟಿ ಚಾರಿಟೇಬಲ್ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕಿರಿ, ಕೊಡಗು ಜಿಲ್ಲಾ ಅಧ್ಯಕ್ಷ ಶೇಖ್ ಅಹಮ್ಮದ್, ಯೇನೆಪೋಯ ಸಂಸ್ಥೆಯ ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು. ವಿಜಯಕುಮಾರ್ ರೈ ಸ್ವಾಗತಿಸಿದರು. ಕುಸುಮಾಧರ ರೈ ಬೂಡು ಕಾರ್ಯಕ್ರಮ ನಿರೂಪಿಸಿದರು.









