ನ್ಯೂಯಾರ್ಕ್: ಸೋಮವಾರ ನಡೆದ ಟಿ20 ವಿಶ್ವಕಪ್ನ ‘ಡಿ’ ಗುಂಪಿನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ 4 ರನ್ಗಳ ಜಯ ಸಾಧಿಸಿತು.ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು 6 ಅಂಕಗಳೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಜತೆಗೆ ಸೂಪರ್ ಎಂಟರ ಘಟ್ಟಕ್ಕೆ ಸ್ಥಾನವನ್ನು ಕಾಯ್ದಿರಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ
ದಕ್ಷಿಣ ಆಫ್ರಿಕಾ ತಂಡವು ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕದ ಜೊತೆಯಾಟದ ನೆರವಿಂದ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗೆ 109 ರನ್ ಗಳಿಸಿ ಸವಾಲನ್ನು ಮುಗಿಸಿತು.50 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ತೌಹಿದ್ ಹೃದಯ್ (37; 34ಎ) ಮತ್ತು ಅನುಭವಿ ಮಹ್ಮದುಲ್ಲಾ (20) ಅವರು ಚೇತರಿಕೆ ನೀಡಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 44 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಬೌಲರ್ಗಳು ಬಿಗಿ ದಾಳಿಯ ಮೂಲಕ ಹಿಡಿತ ಸಾಧಿಸಿದರು. ಕೇಶವ್ ಮಹಾರಾಜ ಹಾಕಿದ ಕೊನೆಯ ಓವರ್ನಲ್ಲಿ ಬಾಂಗ್ಲಾ ತಂಡದ ಗೆಲುವಿಗೆ 11 ರನ್ ಬೇಕಿತ್ತು. ಅಂತಿಮ ಎರಡು ಎಸೆತದಲ್ಲಿ 6 ರನ್ ಬೇಕಿದ್ದಾಗ ಮಹ್ಮದುಲ್ಲಾದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ, ಬೌಂಡರಿ ಲೈನ್ ಬಳಿ ಏಡನ್ ಮರ್ಕರಂ ಕ್ಯಾಚ್ ಹಿಡಿದು ಬಾಂಗ್ಲಾಕ್ಕೆ ನಿರಾಸೆ ಮೂಡಿಸಿದರು. ಕೇಶವ್ ಮಹಾರಾಜ ಮೂರು ವಿಕೆಟ್ ಪಡೆದರೆ, ಕಗಿಸೊ ರಬಾಡ ಮತ್ತು ಹೆನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್ ಗಳಿಸಿದರು.
ಇದಕ್ಕೂ ಮೊದಲು ತಂಜಿಮ್ ಹಸನ್ ಶಕಿಬ್ (18ಕ್ಕೆ3) ಅವರು ತಸ್ಕಿನ್ ಅಹ್ಮದ್ (19ಕ್ಕೆ2) ಆಫ್ರಿಕಾದ ಪ್ರಬಲ ಬ್ಯಾಟಿಂಗ್ ಸರದಿಯನ್ನು ಕಾಡಿದರು. ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಐದು ಓವರ್ಗಳಲ್ಲಿ 23 ರನ್ಗಳಾಗುಷ್ಟರಲ್ಲಿನಾಲ್ಕು ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು. ಹೆನ್ರಿಚ್ ಕ್ಲಾಸೆನ್ (46) ಮತ್ತು ಡೇವಿಡ್ ಮಿಲ್ಲರ್ (29) ಅವರಿಬ್ಬರು ಆರಂಭದ ಕುಸಿತವನ್ನು ತಡೆಗಟ್ಟಿದರು.
ಕ್ಲಾಸೆನ್ ಮತ್ತು ಮಿಲ್ಲರ್ ಐದನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಸೇರಿಸಿ ತಂಡವನ್ನು ಚೇತರಿಕೆಯತ್ತ ಒಯ್ದರು. ಆದರೆ ರನ್ವೇಗ ಹೆಚ್ಚಿಸಲು ಅವರಿಗೆ ಸಾಧ್ಯವಾಗಲಿಲ್ಲ.