ಸುಳ್ಯ:ಕೇಂದ್ರ ಸರಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಒಪ್ಪಲು ಸಾಧ್ಯವಿಲ್ಲ. ಇದು ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯುವ ಮತ್ತು ವಕ್ಫ್ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡುವ ಪ್ರಯತ್ನ. ಇದು ಖಂಡನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಪ್ ಆಸ್ತಿ ದೇವರ ಆಸ್ತಿ. ಮುಸ್ಲೀಂ ಸಮುದಾಯದ ಹಿರಿಯರು
ಮಸೀದಿ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ದಾನವಾಗಿ ನೀಡಿದ ಆಸ್ತಿ. ವಕ್ಫ್ ತಿದ್ದುಪಡಿ ಬಿಲ್ ತರುವ ಮೂಲಕ ವಕ್ಫ್ ಬೋರ್ಡನ್ನು ದುರ್ಬಲಗೊಳಿಸುವ ಮತ್ತು ವಕ್ಪ್ ಆಸ್ತಿಯನ್ನು ವಶಪಡಿಸುವ ಸಾಧ್ಯತೆ ಇದೆ. ವಕ್ಫ್ ಆಸ್ತಿಯ ಮೇಲೆ ಸರಕಾರದ ಹಸ್ತಕ್ಷೇಪ ಸರಿಯಲ್ಲ, ಅಲ್ಲದೆ ವಕ್ಫ್ ಬೋರ್ಡ್ಗೆ ಇತರ ಸಮುದಾಯದವರನ್ನು ಸದಸ್ಯರಾಗಿ ನೇಮಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಹಾಗಾದರೆ ಎಲ್ಲಾ ಧರ್ಮದ ಆಡಳಿತ ಮಂಡಳಿಯಲ್ಲಿ ಎಲ್ಲಾ ಧರ್ಮದವರಿಗೂ ಅವಕಾಶ ನೀಡುವ ಕಾನೂನು ಮೊದಲು ತರಲಿ ಎಂದರು. ಬಜೆಟ್ನಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿ ಹಣ ಕಡಿಮೆ ಮಾಡಲಾಗಿದೆ ಎಂದ ಅವರು ಸೌಹಾರ್ದತೆಯಲ್ಲಿ ಬಾಳುವ ಈ ಸಂದರ್ಭದಲ್ಲಿ ಈ ರೀತಿಯ ಕಾನೂನು ತರಾತುರಿಯಲ್ಲಿ ಮಂಡನೆ ಮಾಡುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದರು. ಈ ರೀತಿಯ ಕಾನೂನು, ಮಸೂದೆಗಳು ಸರಕಾರದ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಸಿದ್ದಿಕ್ ಕೊಕ್ಕೊ,ಅಬ್ಬಾಸ್ ಅಡ್ಪಂಗಾಯ ಉಪಸ್ಥಿತರಿದ್ದರು.