ಸುಳ್ಯ:ಕ್ರೀಡೆಯು ಜೀವನದ ಅವಿಭಾಜ್ಯ ಅಂಗ. ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕ. ಕ್ರೀಡೆಯು ನಮಗೆ ಆರೋಗ್ಯ ರಕ್ಷಣಾ ಕೌಶಲ್ಯವನ್ನು ಕಲಿಸುತ್ತದೆ ಎಂದು ಪ್ರಶಸ್ತಿ ಪುರಸ್ಕೃತ ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ಹೇಳಿದ್ದಾರೆ.ಸುಳ್ಯದ ಗೌಡರ ಯುವ ಸೇವಾ ಸಂಘದಿಂದ ಪ್ರವರ್ತಿಸಲ್ಪಡುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ಪ್ರಯುಕ್ತ ಕೊಡಿಯಾಲಬೈಲು ಎಂಜಿಎಂ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ
ಕ್ರೀಡಾ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ಪ್ರಯುಕ್ತ
ಮಲ್ನಾಡ್ ಮಹಾತ್ಮಾಗಾಂಧಿ ಪ್ರೌಢಶಾಲೆಗೆ ನಿರ್ಮಿಸುವ ಎರಡು ಕೊಠಡಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸ್ಥೆಯ ಅಧ್ಯಕ್ಷ ಪಿ.ಸಿ.ಜಯರಾಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಅವರು ಮಾತನಾಡಿ ಗೌಡರ ಯುವ ಸೇವಾ ಸಂಘ ಸ್ಥಾಪನೆಯಾಗಿರುವುದು ವೆಂಕಟರಮಣ ಸೊಸೈಟಿ ಮತ್ತು ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢ ಶಾಲೆಯ ಆರಂಭವಾಗಲು ಕಾರಣವಾಗಿದೆ. ಒಂದು ಸಮುದಾಯ ಸಂಘಟನೆಯ ಮೂಲಕ ಆರಂಭಗೊಂಡ ವೆಂಕಟರಮಣ ಸೊಸೈಟಿಯ ಮೂಲಕ ಎಲ್ಲಾ ಸಮುದಾಯದವರಿಗೂ ಸೇವೆಯನ್ನು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು. 25 ವರ್ಷದ ಸಂದರ್ಭದಲ್ಲಿ ಸಂಸ್ಥೆಯ 25 ಶಾಖೆಗಳು ಪೂರ್ತಿಯಾಗಲಿದೆ. ಬೆಳ್ಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು ಮತ್ತು ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ಇದರ ಅಧ್ಯಕ್ಷ ಚಂದ್ರಾ ಕೋಲ್ಟಾರ್ ಮಾತನಾಡಿದರು.
ಶಾಲೆಗೆ ಬ್ಯಾಂಡ್ ಸೆಟ್ ಕೊಡುಗಡಯಾಗಿ ನೀಡಿದ ಸೊಸೈಟಿಯ ನಿರ್ದೇಶಕ ಕೆ.ಸಿ.ಸದಾನಂದ ಅವರನ್ನು ಸನ್ಮಾನಿಸಲಾಯಿತು.
ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢ ಶಾಲೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲು,ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ, ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ಜಾಕೆ ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಕೆ.ಸಿ.ಸದಾನಂದ, ಜಯಲಲಿತ ಕೆ.ಎಸ್, ಲತಾ ಎಸ್.ಮಾವಜಿ, ಹೇಮಚಂದ್ರ ಐ.ಕೆ, ನವೀನ್ಕುಮಾರ್ ಜಿ.ವಿ, ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೆಂಕಟರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕರಾದ ಚಂದ್ರಶೇಖರ ಮೇರ್ಕಜೆ ವಂದಿಸಿದರು. ನಿರ್ದೇಶಕರಾದ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟ:
ಸಂಘದ ಕಾರ್ಯವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ, ಇತರೆ ಸಹಕಾರ ಸಂಘಗಳಿಗೆ, ಸಂಸ್ಥೆಯ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ, ಸಲಹಾ ಸಮಿತಿಯವರಿಗೆ ಹಾಗೂ ಸಿಬ್ಬಂದಿಗಳಿಗೆ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮತ್ತು ಇತರೆ ಸಹಕಾರ ಸಂಘಗಳಿಗೆ ಹಗ್ಗಜಗ್ಗಾಟ, ಅದೃಷ್ಟ ಪುರುಷ ಮತ್ತು ಅದೃಷ್ಟ ಮಹಿಳೆ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯರಿಗೆ ನಿಧಾನ ಬೈಕ್ ಸ್ಕೂಟಿ ಓಡಿಸುವುದು. ಲಕ್ಕಿ ಗೇಮ್, ಗುಂಡೆಸೆತ ಮತ್ತು ಒಂದು ನಿಮಿಷದ ಸ್ಪರ್ಧೆ, ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸಲಹಾ ಸಮಿತಿಯವರಿಗೆ ಹಿರಿಯರ ನಡಿಗೆ ಸ್ಪರ್ಧೆ, ಭಾಷಣ ಸ್ಪರ್ಧೆ, ಲಕ್ಕಿ ಗೇಮ್ ಮತ್ತು ಒಂದು ನಿಮಿಷದ ಸ್ಪರ್ಧೆ, ಸಿಬ್ಬಂದಿಗಳಿಗೆ ಹಗ್ಗಜಗ್ಗಾಟ, ನಿಧಾನ ಬೈಕ್, ಸ್ಕೂಟಿ ಓಡಿಸುವುದು, ಗುಂಡೆಸೆತ ಮತ್ತು ಲಕ್ಕಿ ಗೇಮ್ ಸ್ಪರ್ಧೆ ಏರ್ಪಡಿಸಲಾಗಿತ್ತು.









