ಸುಳ್ಯ:ಕತ್ತಲು ಬೆಳಕಿನಾಟದ ವರ್ಣ ವೈಭವ, ಆಕಾಶದಲ್ಲಿ ವರ್ಣ ಚಿತ್ತಾರ ಬಿಡಿಸಿದ ಸಿಡಿ ಮದ್ದು ಪ್ರಯೋಗ, ಜಗಮಗಿಸುವ ವಿದ್ಯುತ್ ದೀಪಗಳ ವರ್ಣಮಯ ಅಲಂಕಾರ, ಜನಮನ ಗೆದ್ದ ಸ್ತಬ್ಧ ಚಿತ್ರಗಳ ಮೋಹಕ ಭಂಗಿ.. ಅಬ್ಬರಿಸಿದ ಡಿಜೆ ತಾಳಕ್ಕೆ ನೃತ್ಯದ ಸೊಬಗು ನೀಡಿದ ಯುವ ಸಮೂಹ, ಹುಲಿ ವೇಷ, ಪಿಲಿ ಕುಣಿತ.. ಚೆಂಡೆ ವಾದ್ಯ ಮೇಳಗಳು.. ಹೀಗೆ ಸುಳ್ಯ ನಗರದಲ್ಲಿ ವರ್ಣನಾತೀತವಾಗಿ ನಡೆದ ವರ್ಣ ರಂಜಿತ
ಶೋಭಾಯಾತ್ರೆಯೊಂದಿಗೆ ಒಂಭತ್ತು ದಿನಗಳ ಕಾಲ ನಡೆದ ವೈಭವದ ಸುಳ್ಯ ದಸರಾ ಸಮಾಪನಗೊಂಡಿತು. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ , ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ , ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ 51 ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ -ಸುಳ್ಯ ದಸರಾ ಸರ್ವಾಲಂಕೃತಗೊಂಡ ರಥದಲ್ಲಿ ಸಾಗಿದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಪಯಸ್ವಿನಿ ನದಿಯಲ್ಲಿ ಜಲಸ್ತಂಭನಗೊಳಿಸುವುದರೊಂದಿಗೆ ಸಂಪನ್ನಗೊಂಡಿತ್ತು . ವಿಶೇಷವಾಗಿ ಅಲಂಕರಿಸಿದ ವಿದ್ಯುತ್ ದೀಪಗಳಿಂದ
ಕಂಗೊಳಿಸಿದ ಮಂಟಪದಲ್ಲಿ ಕುಳ್ಳಿರಿಸಿದ ಶ್ರೀದೇವಿಯ ವಿಗ್ರಹ ಶೋಭಾಯಾತ್ರೆಯ ಮುಂಭಾಗದಲ್ಲಿ ಮತ್ತು ಆಕರ್ಷಕ ಸ್ತಬ್ಧ ಚಿತ್ರಗಳು ಅದರ ಹಿಂದೆ ಸಾಗಿ ಬಂತು. ಶೋಭಾಯಾತ್ರೆಯೂ ಶ್ರೀ ಶಾರದಾಂಬಾ ಕಲಾ ವೇದಿಕೆಯಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಮೈಮನ ರೋಮಾಂಚನಗೊಳಿಸಿದ 15 ಕ್ಕೂ ಹೆಚ್ಚು ಚಲಿಸುವ ಚಿತ್ತಾಕರ್ಷಕ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಕಿವಿಗಪ್ಪಳಿಸಿದ ನಾಸಿಕ್ ಬ್ಯಾಂಡ್ನ ಅಬ್ಬರ, ಕೊಂಬು, ಕಹಳೆ, ವಾಲಗ, ವಿಶೇಷ ಸಿಡಿಮದ್ದು ಹೀಗೆ ಸುಳ್ಯ ನಗರದಲ್ಲಿ ಸುಮಾರು 10 ಗಂಟೆಗೂ ಹೆಚ್ಚು ಕಾಲ ನಡೆದ ಶೋಭಾಯಾತ್ರೆ ಅಕ್ಷರಷಃ ನೋಡುಗರ ಕಣ್ಣಿಗೆ ಹಬ್ಬವನ್ನೇ ಸೃಷ್ಠಿಸಿತು. ಚಲಿಸುವ ಹುಲಿ, ಹುಲಿ ವೇಷಗಳು ವಿವಿಧ ಪುರಾಣ ಕಥೆಗಳನ್ನು ಆಧರಿಸಿ ಪ್ರಸ್ತುತ ಪಡಿಸಿದ ಚಲಿಸುವ ಸ್ತಬ್ಧ ಚಿತ್ರಗಳು, ಯಕ್ಷಗಾನ ವೇಷಗಳು ಸೇರಿದಂತೆ ಹತ್ತಾರು
ಸುಳ್ಯ ದಸರಾ- ವೈಭವದ ಶೋಭಾ ಯಾತ್ರೆ
The Sullia Mirror YouTube Channel
Please watch and subscribe
ಆಕರ್ಷಣೆಗಳು ಮನಸೂರೆಗೊಂಡವು. ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆ ವೀಕ್ಷಿಸಿದರು. ಹತ್ತು ಹಲವು ಆಕರ್ಷಣೆಗಳೊಂದಿಗೆ ಸಾಗಿದ ಶ್ರೀದೇವಿಯ ಅದ್ಧೂರಿ ಶೋಭಾಯಾತ್ರೆಯನ್ನು ಭಕ್ತ ಸಮೂಹ ಭಕ್ತಿ ಭಾವದಿಂದ ಕಣ್ತುಂಬಿ ಕೊಂಡರು. ಸಾವಿರಾರು ಮಂದಿ ಶೋಭಾಯಾತ್ರೆಯ ಜೊತೆ ಹೆಜ್ಜೆ ಹಾಕಿದರು. ನೂರಾರು ಯುವಕರು ಡಿಜೆ ತಾಳಕ್ಕೆ ಕುಣಿದು
ಕುಪ್ಪಳಿಸಿದರು.9 ದಿನಗಳ ಕಾಲ ಶಾರದಾಂಬಾ ವೇದಿಕೆಯಲ್ಲಿ ಪೂಜಿಸಲ್ಪಟ್ಟ ಶ್ರೀದೇವಿಗೆ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ಮಹಾಪೂಜೆ ನಡೆದು ವೈಭವದ ಶೋಭಾಯಾತ್ರೆ ಆರಂಭಗೊಂಡಿತು. ವಿವಿಧ ಸ್ಥಳಗಳಲ್ಲಿ ದೇವಿಗೆ ಸಾರ್ವಜನಿಕರು ಹಣ್ಣು ಕಾಯಿ ಅರ್ಪಿಸಿದರು.
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್,ಅಧ್ಯಕ್ಷ ಚಿದಾನಂದ ವಿದ್ಯಾನಗರ, ಶಾರದಾಂಬಾ ದಸರಾ ಸೇವಾ ಟ್ರಸ್ಟ್ನ ಅಧ್ಯಕ್ಷ ನವೀನ್ಚಂದ್ರ ಕೆ.ಎಸ್, ಉಪಾಧ್ಯಕ್ಷ ನಾರಾಯಣ ಕೇಕಡ್ಕ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವ ಸಲಹೆಗಾರರಾದ ಡಾ.ಲೀಲಾಧರ್ ಡಿ.ವಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪ್ರದೀಪ್ ಕೆ.ಎನ್. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ ಹಾಗು ಮೂರು ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.