ಸುಳ್ಯ: ಅಗಲಿದ ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ (ಎಸ್.ಎನ್.ಜಯರಾಮ)ಅವರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದರು. ಹಲವಾರು ಯಕ್ಷಗಾನದ ಪಾತ್ರಗಳಿಗೆ ಜೀವ ತುಂಬಿದ್ದ ಅವರು ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು.ಸುಳ್ಯದ ಹೆಸರಾಂತ ನಾವೂರು ಮನೆತನದಲ್ಲಿ 13-09-1937 ರಂದು, ಎಸ್.ಎನ್. ರಾಮಕೃಷ್ಣಯ್ಯ ಮತ್ತು ಚಿನ್ನಮ್ಮ ದಂಪತಿಗಳ ಮಗನಾಗಿ ಜನಿಸಿದ ಸುಳ್ಯ ಜಯರಾಮ ನಾವೂರು ‘ಸುಜನಾ ಸುಳ್ಯ ‘ ಎಂದೇ ಪ್ರಸಿದ್ಧರು.1952 ರಿಂದ

1954ರ ವರೆಗೆ ಹೈದರಾಬಾದ್ನ ಶ್ರೀ ವೆಂಕಟೇಶ ಭರತ ನಾಟಕ ಮಂಡಳಿಯಲ್ಲಿ ನಟರಾಗಿ ಪರಿಣತಿ ಪಡೆದ ಇವರು, ಮಾವ ದಿ.ಕಾವು ಶ್ರೀನಿವಾಸರಾಯರ ಪ್ರೇರಣೆಯಿಂದ ಯಕ್ಷಗಾನದಲ್ಲಿ ಆಸಕ್ತಿ ವಹಿಸಿದರು.
1958 ರಲ್ಲಿ ಬಳ್ಳಂಬೆಟ್ಟು ಶಾಸ್ತ್ರಾವೇಶ್ವರ ಯಕ್ಷಗಾನ ಮಂಡಳಿಯಲ್ಲಿ ಪ್ರಥಮ ಬಾರಿಗೆ ಗೆಜ್ಜೆಕಟ್ಟಿ ವಿಶ್ವಾಮಿತ್ರ ಮೇನಕೆಯ ನಾರದನಾಗಿ ರಂಗ ಪ್ರವೇಶ ಮಾಡಿದರು. ನಂತರದಲ್ಲಿ ಬಳ್ಳಂಬೆಟ್ಟು ಯಕ್ಷಗಾನ ಮೇಳ, ಶ್ರೀ ಧರ್ಮಸ್ಥಳ ಮೇಳ, ಇರಾ ಸೋಮನಾಥೇಶ್ವರ ಯಕ್ಷಗಾನ ಮೇಳ, ಕುದ್ರೋಳಿ ಯಕ್ಷ ಮೇಳ, ಕೂಡ್ಲು ಮೇಳ, ಆದಿ ಸುಬ್ರಹ್ಮಣ್ಯ ಮೇಳ, ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ಯಕ್ಷಗಾನ ಮೇಳ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳಗಳಲ್ಲಿ 36 ವರ್ಷಗಳ

ಸುಧೀರ್ಘ ಸೇವೆಗೈದ ಸುಜನಾ ಎಲ್ಲರ ‘ನೆಚ್ಚಿನ ಹಾಸ್ಯಗಾರರು’ ಆಗಿದ್ದರು. ಸ್ತ್ರೀ ಪಾತ್ರದಿಂದ ತೊಡಗಿ ಪುಂಡು ವೇಷ, ಕಿರೀಟ ವೇಷ ಮುಂತಾಗಿ ಯಕ್ಷರಂಗದ ಎಲ್ಲಾ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲವರಾಗಿದ್ದರು.
ಅತಿಕಾಯ, ದೇವೇಂದ್ರ, ಭಸ್ಮಾಸುರ, ಚಂಡ-ಮುಂಡ, ರಕ್ತಬೀಜ, ಅರ್ಜುನ, ದಕ್ಷ, ಜಮದಗ್ನಿ ಮುಂತಾದ ಗಂಭೀರ ಪಾತ್ರಗಳಲ್ಲಿ ಮಿಂಚಿದ ಇವರ ಹಾಸ್ಯದ ರಕ್ಕಸ ದೂತ, ಕೇಳು ಪಂಡಿತ, ವನಪಾಲಕ, ವ್ರದ್ಧಬ್ರಾಹ್ಮಣ, ಮುದಿಯಪ್ಪಣ್ಣ, ಬಾಹುಕ, ಬ್ರಹ್ಮಕಪಾಲದ ಭಿಕ್ಷುಕ ಮುಂತಾದ ಪಾತ್ರಗಳು ಯಕ್ಷಗಾನದ ಹಾಸ್ಯಲೋಕದಲ್ಲಿ ಒಂದಕ್ಕಿಂತ ಒಂದು ವಿಶೇಷ ಅನ್ನುವಂತೆ ಸೃಷ್ಟಿಸಲ್ಪಟ್ಟು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ತನ್ನ ಕ್ರಿಯಾಶೀಲತೆಯಿಂದಲೇ ಪಾತ್ರಗಳಿಗೆ ಹೊಸ ಆಯಾಮ ನೀಡುತ್ತಿದ್ದ ಸುಜನಾ ಯಕ್ಷಗಾನದ ‘ವಿಕಟನಟ’ ಎಂಬ ಬಿರುದನ್ನು ಪಡೆದರು.
ಓದುವ ಮತ್ತು ಬರೆಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದ ಸುಜನಾ ಸದಾ ಅಧ್ಯಯನ ಶೀಲರಾಗಿದ್ದರು.

ಚೌಕಿ ಮತ್ತು ರಂಗಸ್ಥಳದ ಶಿಸ್ತನ್ನು ಎಂದೂ ಮೀರದ ಯಕ್ಷನಿಷ್ಠರಾಗಿದ್ದರು.
ತಾಳಮದ್ದಳೆಯ ಅರ್ಥದಾರಿಯಾಗಿ, ಚೆಂಡೆ-ಮದ್ದಲೆವಾದಕರಾಗಿ, ಭಾಗವತರಾಗಿ, ನಾಟ್ಯ ಗುರುಗಳಾಗಿ, ವೇಷ ಭೂಷಣ ನಿರ್ಮಾತೃರಾಗಿ, ರಂಗವಿನ್ಯಾಸಕನಾಗಿ ಹೀಗೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ದುಡಿದು ‘ಯಕ್ಷ ಸವ್ಯಸಾಚಿ’ ಅನಿಸಿಕೊಂಡರು.
1974 ರಲ್ಲಿ ಸುಳ್ಯದಲ್ಲಿ ವಿದೇಯದೇವಿ ನಾಟ್ಯ ಕಲಾ ಸಂಘ ಸ್ಥಾಪಿಸಿ, ಮೇಳದ ಬಿಡುವಿನ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಹವ್ಯಾಸಿಗಳಿಗೆ ಯಕ್ಷ ಶಿಕ್ಷಣ ನೀಡುತ್ತಾ ನೂರಾರು ಯಕ್ಷಪ್ರತಿಭೆಗಳ ಸೃಷ್ಟಿಗೆ ಕಾರಣರಾದರು.
ಉಡುಪಿ ಯಕ್ಷಗಾನ ಕಲಾರಂಗದ ‘ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಜ್ಯೋತ್ಸವ ಸಂಮಾನ, ಕಿರಿಕ್ಕಾಡು ವಿಷ್ಣುಭಟ್ಟ ಜನ್ಮ ಶತಮಾನೋತ್ಸವ ಪುರಸ್ಕಾರ, ತಾಲೂಕು ರಾಜ್ಯೋತ್ಸವ ಸನ್ಮಾನ, ಪರಿವಾರ ರಂಗ ಯಕ್ಷ ಪ್ರಶಸ್ತಿ, ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಮ್ಮಾನ, ಲಕ್ಷ್ಮೀ ಭಾಸ್ಕರ ಯಕ್ಷ ಸೇವಾ ನಿಷ್ಠ ಪ್ರಶಸ್ತಿ, ಮೈಸೂರು ಮಹಾಜನ ಯಕ್ಷ ಸಮಿತಿ ಸನ್ಮಾನ, ಜಿಲ್ಲಾ ಗಡಿನಾಡ ಉತ್ಸವ ಸಮ್ಮಾನ, ಮೊಗಸಾಲೆ ಶಾರದಮ್ಮ ಯಕ್ಷ ಪ್ರಶಸ್ತಿ, ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಸನ್ಮಾನ – ಸೇರಿದಂತೆ ಹಲವು ಗೌರವಗಳು ಇವರಿಗೆ ಸಿಕ್ಕಿವೆ.
1992ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ರಂಗಸ್ಥಳದಿಂದ

ದೂರ ಸರಿದಿದ್ದರೂ, ತನ್ನ ಪುತ್ರ ಜೀವನ್ ರಾಮ್ ನಡೆಸುತ್ತಿರುವ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಯಕ್ಷಗಾನ, ನಾಟಕ, ಸಂಗೀತ, ನೃತ್ಯ ಮುಂತಾದ ಕಾರ್ಯಕ್ರಮಗಳು ನಿರಂತರ ನಡೆಯುವಲ್ಲಿ ಸುಜನಾರು ಬಹುದೊಡ್ಡ ಶಕ್ತಿಯಾಗಿದ್ದರು.
ತನ್ನ ಮನೆಯಂಗಳದಲ್ಲೇ ಯಕ್ಷ ದ್ರೋಣ ಬಣ್ಣದ ಮಾಲಿಂಗರ ಮಹಿರಾವಣ ವೇಷದ ಬೃಹತ್ ಯಕ್ಷ ಪ್ರತಿಮೆಯನ್ನು ನಿರ್ಮಾಣ ಮಾಡಲು ಕಾರಣರಾಗಿದ್ದಾರೆ. ಯಕ್ಷಗಾನವೆಂದರೆ ಪುಟಿದೇಳುವ ಸುಜನಾ ಸುಳ್ಯದ ರಂಗಮನೆಯಲ್ಲಿ ಆರಂಭವಾದ ತನ್ನ ಹೆಸರಿನ ‘ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ’ದಲ್ಲಿ ಸುಮಾರು 50 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತೆಂಕುತಿಟ್ಟು ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳವನ್ನು ಅಭ್ಯಸಿಸಲು ಉಚಿತವಾಗಿ ಅನುವು ಮಾಡಿಕೊಟ್ಟಿದ್ದರು.












