ಮುಂಬೈ:ಏಕದಿನ ವಿಶ್ವಕಪ್ ನಡುವೆಯೇ ಐಸಿಸಿ ಶ್ರೀಲಂಕಾದ ಕ್ರಿಕೆಟ್ ಸದಸ್ಯತ್ವವನ್ನು ರದ್ದುಗೊಳಿಸಿದೆ. ಇದರಿಂದಾಗಿ ಈಗ ಈ ತಂಡಕ್ಕೆ ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಾಧ್ಯವಾಗುವುದಿಲ್ಲ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಶುಕ್ರವಾರ ಶ್ರೀಲಂಕಾ ಕ್ರಿಕೆಟ್ನ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಶ್ರೀಲಂಕಾ ಸರ್ಕಾರ, ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಕಂಡುಬಂದಿದೆ. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ
ಐಸಿಸಿ ಈ ದೊಡ್ಡ ನಿರ್ಧಾರ ಕೈಗೊಂಡಿದೆ.
ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ, ಭಾರತದ ವಿರುದ್ಧ 302 ರನ್ಗಳಿಂದ ಹೀನಾಯ ಸೋಲು ಕಂಡಿತ್ತು. ಆ ಬಳಿಕ ಶ್ರೀಲಂಕಾ ಸರ್ಕಾರವು ಇಡೀ ಮಂಡಳಿಯನ್ನು ವಜಾಗೊಳಿಸಿತು. ಲಂಕಾ ಸರ್ಕಾರದ ಈ ಹಸ್ತಕ್ಷೇಪ ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಹಲವು ಬದಲಾವಣೆಗಳಾಗಿವೆ. ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಗಮನಿಸಿರುವ ಐಸಿಸಿ, ಲಂಕಾ ಕ್ರಿಕೆಟ್ ತಂಡ ಶುಕ್ರವಾರ ತವರಿಗೆ ಮರಳಿದ ನಂತರ ಈ ನಿರ್ಧಾರವನ್ನು ಪ್ರಕಟಿಸಿದೆ. ಈ ಬಗ್ಗೆ ಐಸಿಸಿ ಇಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಸಿಸಿಯ ನಿಯಮವನ್ನು ಉಲ್ಲಂಘಿಸಿದೆ ಎಂಬ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಲಂಕಾ ಮಂಡಳಿಯು ತನ್ನ
ವ್ಯವಹಾರಗಳಲ್ಲಿ ಶ್ರೀಲಂಕಾ ಸರ್ಕಾರದ ಹಸ್ತಕ್ಷೇಪವನ್ನು ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಲಂಕಾ ಮಂಡಳಿಯನ್ನು ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ಹೇಳಿದೆ.
ನವೆಂಬರ್ 21 ರಂದು ನಡೆಯುವ ಸಭೆಯಲ್ಲಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಶ್ರೀಲಂಕಾ ತನ್ನ ಅಮಾನತು ಅವಧಿಯಲ್ಲಿ ಯಾವುದೇ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮತ್ತು ದ್ವಿಪಕ್ಷೀಯ ಸರಣಿಗಳನ್ನು ಆಡಲು ಸಾಧ್ಯವಾಗುವುದಿಲ್ಲ.









