ನವದೆಹಲಿ: ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಓಂ ಬಿರ್ಲಾ ಅವರನ್ನು ಕಣಕ್ಕಿಳಿಸಿದ್ದರೆ, ಇಂಡಿಯಾ ಬಣದಿಂದ ಕಾಂಗ್ರೆಸ್ ಸಂಸದ ಕೊಡಿಕುನ್ನಿಲ್ ಸುರೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಡೆಪ್ಯುಟಿ ಸ್ಪೀಕರ್ ಆಯ್ಕೆ ವಿಚಾರವಾಗಿ ನಡೆದ
ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಇಂಡಿಯಾ ಬಣ ಅಭ್ಯರ್ಥಿಯನ್ನು ಘೋಷಿಸಿದೆ. ಬುಧವಾರ ಲೋಕಸಭೆಯ ನೂತನ ಸ್ಪೀಕರ್ ಆಯ್ಕೆಗೆ ಮತದಾನ ನಡೆಯಲಿದೆ.
ಬಿರ್ಲಾ ಮತ್ತು ಸುರೇಶ್ ಕ್ರಮವಾಗಿ ಎನ್ಡಿಎ ಮತ್ತು ಇಂಡಿಯಾ ಬಣಗಳ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. 17ನೇ ಲೋಕಸಭೆಯಲ್ಲೂ ಬಿರ್ಲಾ ಸಭಾಧ್ಯಕ್ಷರಾಗಿದ್ದರು. ಒಂದೊಮ್ಮೆ ಅವರು ಗೆದ್ದರೆ ಕಳೆದ 25 ವರ್ಷಗಳಲ್ಲಿ 2ನೇ ಬಾರಿಗೆ ಈ ಹುದ್ದೆಗೆ ಏರಿದ ಏಕೈಕ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ರಾಜಸ್ಥಾನದ ಕೋಟ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಬಿರ್ಲಾ ಆಯ್ಕೆಯಾಗಿದ್ದಾರೆ.
ಕೇರಳದಿಂದ 7ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.