ಸುಳ್ಯ:ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆಯ ಕಾರ್ಯಕ್ರಮ ಎ.6ರಂದು ಪೂ.10ರಿಂದ
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.
ಎಲ್.ಎಸ್. ಶೇಷಗಿರಿ ರಾವ್ ಅವರು ಕನ್ನಡ ಸಾಹಿತ್ಯ ವಿಮರ್ಶೆಗೆ ಭದ್ರ ಬುನಾದಿ ಹಾಕಿದವರು. ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದ ಈ ಹಿರಿಯರ
ಶತಮನೋತ್ಸವದ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮದ ಸ್ನೇಹ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಎಲ್.ಎಸ್.ಎಸ್. ವಿದ್ಯಾನಿಧಿಯ ಸ್ಥಾಪನೆಯ ಕಾರ್ಯಕ್ರಮವೂ ಇದೆ. ಭಾರತಿ ಶೇಷಗಿರಿ ರಾವ್ ಅವರು ವಿದ್ಯಾನಿಧಿ ಸಮರ್ಪಣೆಯನ್ನು ಮಾಡಲಿದ್ದಾರೆ. ಶೇಷಗಿರಿ ರಾವ್ ಅವರ ಸಾಂಸ್ಕೃತಿಕ ಕೊಡುಗೆಗಳನ್ನು ಕುರಿತು ಸಾಹಿತಿ ಹಾಗೂ ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರು ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರಿನ ಖ್ಯಾತ ಚಿಂತಕ ಹಾಗೂ ಕನ್ನಡಪರ ಹೋರಾಟಗಾರ ರಾ. ನಂ. ಚಂದ್ರಶೇಖರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಇದೇ ಸಮಾರಂಭದಲ್ಲಿ ವಿಶೇಷ ಕಾರ್ಯಕ್ರಮವಾಗಿ ಜರ್ಮನಿಯ ಹೋಮ ಚಿಕಿತ್ಸಾ ತಜ್ಞ ಡಾ. ಉರ್ಲಿಕ್ ಬರ್ಕ್ ಅವರು “ಅಗ್ನಿಹೋತ್ರದ ಮಹತ್ವ”ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಅವರು 6ನೇ ತಾರೀಕಿನಂದು ಸೂರ್ಯೋದಯ ಹಾಗೂ ಸೂರ್ಯಾಸ್ತಕ್ಕೆ ಸರಿಯಾಗಿ ಸ್ನೇಹ ಶಾಲೆಯ ಸೂರ್ಯಾಲಯದಲ್ಲಿ ಅಗ್ನಿಹೋತ್ರ ನಡೆಸಲಿದ್ದಾರೆ. ಸಾರ್ವಜನಿಕರಿಗೆ ಇದನ್ನು ವೀಕ್ಷಿಸಲು ಅವಕಾಶವಿದೆ. ಡಾ. ಉರ್ಲಿಕ್ ಬರ್ಕ್ ಅವರು ಯುರೋಪು ಮತ್ತು ಏಶಿಯಾದ ವಿಶ್ವವಿದ್ಯಾಲಗಳಲ್ಲಿ ವೇದ ಜ್ಞಾನ ಪ್ರಸಾರ ಮಾಡುತ್ತಿದ್ದಾರೆ. ಅವರು ಅಂತಾರಾಷ್ಟ್ರೀಯ ಪರಿಸರ ತಜ್ಞ ದೆಹಲಿಯ ಅರುಣ್ ಕಶ್ಯಪ್ ರೊಂದಿಗೆ ಸ್ನೇಹ ಸಂಸ್ಥೆಗೆ ಬರಲಿದ್ದಾರೆ. ಅಗ್ನಿಹೋತ್ರವು ಪರಿಸರದ ಮೇಲೆ ಉಂಟುಮಾಡುವ ಪ್ರಭಾವದ ಬಗ್ಗೆ ಸುಳ್ಯದ ಸಾರ್ವಜನಿಕರಿಗೆ ತಿಳುವಳಿಕೆಗಾಗಿ ಉರ್ಲಿಕ್ ಬರ್ಕ್ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಅವರ ಮಾತುಗಳ ಸಾರಾಂಶವನ್ನು ಕನ್ನಡದಲ್ಲಿ ಹೇಳಲಾಗುವುದು. ಕಾರ್ಯಕ್ರಮಗಳು ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಎ.6ರಂದು ಬೆಳಗ್ಗೆ 10ರಿಂದ 12 ರ ನಡುವೆ ಜರಗಲಿದೆ ಎಂದು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ತಿಳಿಸಿದ್ದಾರೆ.