ಸುಳ್ಯ:ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಶಾಲೆಯ ಆಟದ ಮೈದಾನವನ್ನು ಭತ್ತದ ಗದ್ದೆಯನ್ನಾಗಿ ಮಾಡಿ ಇದೀಗ ಕೊಯ್ಲು ನಡೆಸಿರುವ ಶಾಲಾ ಮಕ್ಕಳ ಕೃಷಿ ಚಟುವಟಿಕೆಯನ್ನು ರಾಜ್ಯದ ಕೃಷಿ ಸಚಿವರಾದ ಎನ್. ಚೆಲುವರಾಯ ಸ್ವಾಮಿ ಶ್ಲಾಘಿಸಿದ್ದಾರೆ. ಶಾಲೆಯ ಭತ್ತದ ಗದ್ದೆ ಹಾಗೂ ಕೊಯ್ಲಿನ ಚಿತ್ರವನ್ನು ಸೇರಿಸಿ ಮೆಚ್ಚುಗೆಯ ಬರಹದ ಮೂಲಕ ಸಚಿವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ನೇಹ ಶಾಲೆಯ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸಹನಾ ಭತ್ತದ ಗದ್ದೆಯ ಹಾಗೂ ಕೊಯ್ಲಿನ ಚಿತ್ರಗಳನ್ನು ಸಚಿವರ ಕಚೇರಿಗೆ ಕಳುಹಿಸಿದ್ದರು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಚಂದ್ರಶೇಖರ ದಾಮ್ಲೆ ತಿಳಿಸಿದ್ದಾರೆ.
ನಮ್ಮ ಹಳೆಯ ವಿದ್ಯಾರ್ಥಿ ಶಾಲೆಯ ಮೇಲಿನ ಅಭಿಮಾನದಿಂದ ಪೊಟೊಗಳನ್ನು ಸಚಿವರ ಕಚೇರಿಗೆ ಕಳುಹಿಸಿದ್ದರು. ಇದನ್ನು ಗಮನಿಸಿ ಸಚಿವರು ಎಕ್ಸ್ ಮೂಲಕ ಶ್ಲಾಘನೆಯ ಮಾತುಗಳನ್ನಾಡಿರುವುದು ನಮಗೆ ಖುಷಿ ಕೊಟ್ಟಿದೆ ಎಂದು ಡಾ.ದಾಮ್ಲೆಯವರು ಹೇಳಿದ್ದಾರೆ.
ಸಚಿವರ ಪೋಸ್ಟ್ ಈ ರೀತಿ ಇದೆ.
“ಬೆಳೆಯುವ ಸಿರಿ ಮೊಳಕೆಯಲ್ಲಿ!
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಬಗ್ಗೆ ಪ್ರಾಯೋಗಿಕ ಅನುಭವ ನೀಡುವ ದಿಶೆಯಲ್ಲಿ ತಮ್ಮ ಶಾಲೆಯ ಆಟದ ಮೈದಾನವನ್ನೇ ತಾತ್ಕಾಲಿಕವಾಗಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ, ಅಲ್ಲಿ ಭತ್ತ ನಾಟಿ ಮಾಡಿ ಕೊಯ್ಲು ಮಾಡಿರುವ ಬಗ್ಗೆ ತಿಳಿದು ಅತ್ಯಂತ ಸಂತೋಷವಾಯಿತು. ಕೊಯ್ಲಿನ ಬಳಿಕ ಈ ಭೂಮಿ ಪುನಃ ಆಟದ ಮೈದಾನವಾಗಿ ಬದಲಾಗಲಿದೆ.
ಮಕ್ಕಳಿಗೆ ಆಟ, ಪಾಠದ ಜೊತೆ ಕೃಷಿ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುವ ಮೂಲಕ ಯುವ ಪೀಳಿಗೆಗೆ ಕೃಷಿ ಚಟುವಟಿಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಜೊತೆ ಅವರಲ್ಲಿ ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡುವಂತಾಗಲು ಇಂತಹ ಚಟುವಟಿಕೆಗಳು ಮಾದರಿ ಹೆಜ್ಜೆಯಾಗಿದೆ”
ಎಂದು ಟ್ವೀಟ್ ಮಾಡಿದ್ದಾರೆ.
ಸ್ನೇಹ ಶಾಲೆಯಲ್ಲಿ ಕಳೆದ ಮಳೆಗಾಲದಲ್ಲಿ ಮಕ್ಕಳು ಹಾಗೂ ಶಿಕ್ಚಕರು ಸೇರಿ ಎರಡು ಗದ್ದೆ ರೂಪಿಸಿ ಭತ್ತ ಬೆಳೆಸಿದ್ದರು. ಒಂದು ಗದ್ದೆಯಲ್ಲಿ ಕಳೆದ ವಾರ ಕೊಯ್ಲು ನಡೆದಿದೆ. ಇನ್ನೊಂದು ಗದ್ದೆಯ ಕೊಯ್ಲು ಶನಿವಾರ ನಡೆಯಲಿದೆ.