ಸುಳ್ಯ:ಸುಳ್ಯದ ಸ್ನೇಹ ಶಾಲೆಯಲ್ಲಿ ಈಗ ಭತ್ತದ ಕೊಯ್ಲಿನ ಸಂಭ್ರಮ. ತರಗತಿಯಲ್ಲಿ ಸದಾ ಪಾಠದಲ್ಲಿ ನಿರತರಾಗಿರುತ್ತಿದ್ದ ಮಕ್ಕಳು ಹಾಗೂ ಶಿಕ್ಷಕರು ನೇಗಿಲ ಯೋಗಿಗಳಾದರು. ಉತ್ಸಾಹದಲ್ಲಿ ತೆನೆ ಕೊಯ್ಲು ಮಾಡಿ ಭತ್ತ ಬೇರ್ಪಡಿಸಿದರು.ಸ್ನೇಹ ಶಾಲೆಯಲ್ಲಿ ಈ ಮಳೆಗಾಲದಲ್ಲಿ ಪ್ರಾಯೋಗಿಕವಾಗಿ ಮಾಡಿದ ಗದ್ದೆಯಲ್ಲಿ ಬೆಳೆದ ಬಂಗಾರಂತೆ ವಿಜೃಂಭಿಸುತ್ತಿದ್ದ ಭತ್ತದ ಪೈರನ್ನು ಕೊಯ್ಲು ಮಾಡಲಾಯಿತು. ಭತ್ತದ ಕೃಷಿಯನ್ನು
ನಿರ್ದೇಶಿಸಿದ ಆಲೆಟ್ಟಿ ಗುಂಡ್ಯದ ನಿತ್ಯಾನಂದರ ನೇತೃತ್ವದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭತ್ತದ ತೆನೆ ಕಟಾವು ಸಂಭ್ರಮದಲ್ಲಿ ಪಾಲ್ಗೊಂಡರು.ಭೂದೇವಿಗೆ ವಂದಿಸಿ, ತೆನೆ ಪೂಜೆ ಮಾಡಿ ಕೊಯ್ಲು ನಡೆಸಿ ತೆನೆಯ ಸೂಡಿಗಳನ್ನು ಮಾಡಿನೊಳಗೆ ತಂದು ಅಲ್ಲಿ ನಿರ್ಮಿಸಿದ್ದ ಮಂಚಕ್ಕೆ ಬಡಿದು ಭತ್ತವನ್ನು ಬೇರ್ಪಡಿಸಿ ರಾಶಿ ಮಾಡಲಾಯಿತು. ಒಂದು ಗದ್ದೆಯನ್ನು ಮಾತ್ರ ಕೊಯ್ಲು ಮಾಡಲಾಗಿದ್ದು
ಇನ್ನೊಂದು ದೊಡ್ಡ ಗದ್ದೆಯಲ್ಲಿರುವ ಭತ್ತಕ್ಕೆ ಬೆಳೆಯಲು ಹತ್ತು ದಿನ ಬೇಕಾಗಿದ್ದು ದೀಪಾವಳಿಯ ಬಳಿಕ ಕಟಾವು ಮಾಡಲಾಗುವುದು.
ಸುಳ್ಯದ ಸ್ನೇಹ ಶಾಲೆಯಲ್ಲಿ ಈ ವರ್ಷ ಪ್ರಾಯೋಗಿಕವಾಗಿ ಆಟದ ಬಯಲಿನಲ್ಲಿ ನೀರು ನಿಲ್ಲುವ ಅಂಗಣದಲ್ಲಿ ಭತ್ತದ ಗದ್ದೆಯನ್ನು ಮಾಡಲಾಗಿತ್ತು. ಭತ್ತ ಬೆಳೆಸುವ ಕ್ರಮ ಹಾಗೂ ಸವಾಲುಗಳನ್ನು ತಿಳಿಯುವುದರೊಂದಿಗೆ ವಿದ್ಯಾರ್ಥಿಗಳಿಗೆ ಅಕ್ಕಿ ಹುಟ್ಟುವುದು ಎಲ್ಲಿಂದ, ಅನ್ನದಾತರ ಕೆಲಸದ ಮಹತ್ವದ ಅರಿವನ್ನು ಮೂಡಿಸುವ ಉದ್ದೇಶದಿಂದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆಯವರು ಈ ಯೋಜನೆಯನ್ನು
ಕೈಗೊಂಡಿದ್ದರು. ಕಳೆದ ಜುಲೈ 10ರಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಗದ್ದೆ ಹದ ಮಾಡಿ ನೇಜಿ ನೆಡುವ ಮೂಲಕ ಪ್ರಯೋಗ ಆರಂಭವಾಗಿತ್ತು. ಮಕ್ಕಳು ದಿನಾಲೂ ಶಾಲೆಗೆ ಬಂದ ತೆನೆಯ ಬೆಳವಣಿಗೆಯನ್ನು ಅವಲೋಕಿಸುತ್ತಿದ್ದರು. ಇದೀಗ 110 ದಿನಗಳು ಕಳೆದಾಗ ಭತ್ತವು ಕಟಾವಿಗೆ ಬಂದಿದೆ.
ಶಾಲೆಯ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆಯವರು ಮತ್ತು ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಹಾಲನ್ನಿಟ್ಟು ತೆನೆಪೂಜೆ ಮಾಡಿದ ಬಳಿಕ ಶಾಲಾ ಮಕ್ಕಳು ಮತ್ತು ಶಿಕ್ಷಕರು ಕೊಯ್ಲಿನ ಕೆಲಸದಲ್ಲಿ ಭಾಗವಹಿಸಿದ್ದರು. ಕೊಯ್ದ ತೆನೆಯನ್ನು ಸೂಡಿ ಕಟ್ಟಿ ಪಡಿ ಮಂಚದ ಬಳಿ ತಂದು ಸೂಡಿಯನ್ನು ಹೊಡೆದು ಭತ್ತವನ್ನು ಬೇರ್ಪಡಿಸಲಾಯಿತು.ಆಲೆಟ್ಟಿ ಗುಂಡ್ಯದ ಕೃಷಿಕ ನಿತ್ಯಾನಂದ ಮತ್ತು ಪತ್ನಿ ಪ್ರತಿಮಾ ಕೊಯ್ಲಿನ ಕೆಲಸದಲ್ಲಿ ಮಾರ್ಗದರ್ಶನ ನೀಡಿದರು.