ಸುಳ್ಯ: ಸುಳ್ಯದಲ್ಲಿ ಅರೆಭಾಷೆ ಅಕಾಡೆಮಿ ವತಿಯಿಂದ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಒಂದು ದಿನದ ವಿಚಾರ ಗೋಷ್ಠಿ ಫೆ.24 ಮತ್ತು 25ರಂದು ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ ಮಾಹಿತಿ ನೀಡಿದರು. ಚಂದ್ರಶೇಖರ ಪೇರಾಲು ಮಾತನಾಡಿ ಫೆ.24ರಂದು
ಸುಳ್ಯದಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಪೂರ್ವಾಹ್ನ 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಭಾಷಾ ವಿಚಾರ ಸಂಕಿರಣ, ಅರೆಭಾಷಾ ವಿಚಾರ ಸಂಕಿರಣ, ಅರೆಭಾಷೆ ಸಂಸ್ಕೃತಿ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ
ಡಾ. ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಥಮ ಅಧಿವೇಶನದ ಭಾಷಾ ವಿಚಾರ ಸಂಕಿರಣದಲ್ಲಿ “ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯದ ಬಗ್ಗೆ ಡಾ. ಧನಂಜಯ ಕುಂಬ್ಲೆ ಹಾಗೂ “ಜಾಗತೀಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು” ಎಂಬ ವಿಷಯದ ಬಗ್ಗೆ ಡಾ.ನರೇಂದ್ರ ರೈ ದೇರ್ಲ ಅವರು ಪ್ರಬಂಧ ಮಂಡಿಸಲಿದ್ದಾರೆ. ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ವಹಿಸಲಿದ್ದಾರೆ.
ದ್ವಿತೀಯ ಅಧಿವೇಶನದಲ್ಲಿ ಅರೆಬಾಷೆ ವಿಚಾರ ಸಂಕಿರಣ ನಡೆಯಲಿದೆ. “ಅರೆಭಾಷೆಯ ಅನನ್ಯತೆಗಳು” ಎಂಬ ವಿಷಯದ ಬಗ್ಗೆ ಕೆ.ಆರ್.ಗಂಗಾಧರ ಹಾಗೂ ‘ಅರೆಭಾಷೆಯ ಪ್ರಾದೇಶಿಕ ವಿಭಿನ್ನತೆಗಳು’ ವಿಷಯದ ಕುರಿತು ಪುರುಷೋತ್ತಮ ಕರಂಗಲ್ಲು ಮಾತನಾಡುವರು. ಹಿರಿಯ ಚಿಂತಕರು ಹಾಗೂ ಸಾಹಿತಿ ಪ್ರೊ.ಕೆ.ಇ.ರಾಧಾಕೃಷ್ಣ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ ಬಳಿಕ ಅರೆಭಾಷೆ ಸಂಸ್ಕೃತಿ ವಿಚಾರ ಸಂಕಿರಣ ನಡೆಯಲಿದೆ. ಅರೆಭಾಷೆನ ಮದುವೆ ಪದ್ಧತಿಗಲ್ಲಿ ಬದಲಾವಣೆಗಳು ಎಂಬ ವಿಷಯದ ಕುರಿತು ದೊಡ್ಡಣ ಬರೆಮೇಲು, ಸಿದ್ಧವೇಶ-ಅರೆಭಾಷಿಕರ ಜಾನಪದ ನೃತ್ಯ ವಿಷಯದ ಬಗ್ಗೆ ಜಯಪ್ರಕಾಶ ಕುಕ್ಕೆಟ್ಟಿ, ಅರೆಭಾಷಿಕರ ದೈವರಾಧಾನೆ ಬಗ್ಗೆ ಡಾ.ಕರುಣಾಕರ ನಿಡಿಂಜಿ ಹಾಗೂ ಕೊಡಗಿನ ಅರೆಭಾಷಿಕರ ಹಬ್ಬ ಹರಿದಿನಗಳ ಬಗ್ಗೆ ಡಾ. ದಯಾನಂದ ಕೂಡಕಂಡಿ ಉಪನ್ಯಾಸ ನೀಡಲಿದ್ದಾರೆ. ಗೋಷ್ಟಿಯ ಅಧ್ಯಕ್ಷತೆಯನ್ನು ಪಟ್ಟಡ ಶಿವಕುಮಾರ್ ವಹಿಸಲಿದ್ದಾರೆ.
ಕೆ.ಟಿ.ವಿಶ್ವನಾಥ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಫೆ.25ರಂದು ಗಡಿನಾಡು ಸುಳ್ಯ ಪರಿಸರದ ಭಾಷಾ ಪರಂಪರೆ ವಿಷಯದಲ್ಲಿ ಒಂದು ದಿನದ ವಿಚಾರಗೋಷ್ಠಿ ನಡೆಯಲಿದ್ದು, 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಸದ್ಸಯ ಯಾಕೂಬ್ ಖಾದರ್ ಗುಲ್ಪಾಡಿ, ಡಾ.ರುದ್ರಕುಮಾರ್, ಮಧುರಾ ಉಪಸ್ಥಿತರಿರುವರು. ವಿಶ್ವನಾಥ ಕೆ.ಟಿ. ಅಧ್ಯಕ್ಷತೆ ವಹಿಸುವರು. ಬಳಿಕ ಭಾಷಾ ವಿಚಾರಗೋಷ್ಠಿಗಳು ನಡೆಯಲಿದ್ದು, ಕವಯತ್ರಿ ಸ್ಮಿತಾ ಅಮೃತರಾಜ್ ಅವರು ಅರೆಭಾಷೆ ಬಗ್ಗೆ, ವಿಶ್ರಾಂತ ಪ್ರಾಂಶುಪಾಲ ಡಾ.ಪೂವಪ್ಪ ಕಣಿಯೂರು ಅವರು ತುಳು ಭಾಷೆ ಬಗ್ಗೆ, ಕೊರಳ್ ಕಲಾ ತಂಡದ ಅಧ್ಯಕ್ಷ ರಮೇಶ್ ಮಂಚಕಲ್ಲು ಮಂಗಳೂರು ಅವರು ಕೊರಗ ಭಾಷೆ ಬಗ್ಗೆ, ಬರಹಗಾರ್ತಿಸಹನಾ ಕಾಂತಬæೖಲು ಅವರು ಹವ್ಯಕ ಭಾಷೆ ಬಗ್ಗೆ, ಅಧ್ಯಾಪಕ ಡಾ.ಸುಂದರ ಕೇನಾಜೆ ಅವರು ಮಲೆಯಾಳಿ ಭಾಷೆ ಬಗ್ಗೆ, ಬರಹಗಾರ ಇಸ್ಮತ್ ಪಜೀರ್ ಅವರು ಬ್ಯಾರಿ ಭಾಷೆ ಬಗ್ಗೆ, ಪಶು ವೈದ್ಯಾಧಿಕಾರಿ ಡಾ.ನಿತಿನ್ಪ್ರಭು ಅವರು ಕೊಂಕಣಿ ಭಾಷೆ ಬಗ್ಗೆ, ಬರಹಗಾರ ಡಾ.ಸೆಲ್ವರತ್ನಂ ಕಂದಡ್ಕ ಅವರು ತಮಿಳು ಭಾಷೆ ಬಗ್ಗೆ ವಿಚಾರ ಮಂಡಿಸುವರು.ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ,ರುದ್ರಕುಮಾರ್ ಅಧ್ಯಕ್ಷತೆ ವಹಿಸುವರು. ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಸಮಾರೋಪ ನುಡಿ ಮಾತನಾಡುವರು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್ ಎಂ.ಎಂ., ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಜ್ನಾನೇಶ್ ಎನ್.ಎ., ಮಧುರಾ, ಲೋಕೇಶ್ ಪೆರ್ಲಂಪಾಡಿ, ಡಾ.ಅನುರಾಧಾ ಕುರುಂಜಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






