ಮಂಗಳೂರು:ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಮಂಗಳೂರುರವರ ಸಹಭಾಗಿತ್ವದಲ್ಲಿ ಮಂಗಳೂರು ನಗರದಲ್ಲಿ ಫೆ.20ರಿಂದ28ರ ತನಕ ಕರಾವಳಿ ಮೈದಾನದಲ್ಲಿ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ- ನಮ್ಮ ಸರಸ್ ಮೇಳ-2026ನ್ನು ಆಯೋಜಿಸಲಾಗಿದೆ.ರಾಜ್ಯದಲ್ಲಿ ಸ್ವ-ಸಹಾಯ
ಗುಂಪಿನ ಮಹಿಳೆಯರು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಹಳ್ಳಿಸಂತೆ, ತಾಲ್ಲೂಕು ಮಟ್ಟದಲ್ಲಿ ಮಾಸಿಕ ಸಂತೆ, ಜಿಲ್ಲಾ ವಸ್ತುಪ್ರದರ್ಶನ ಮಾರಾಟಮೇಳ ಏರ್ಪಡಿಸುವುದಷ್ಟೆ ಅಲ್ಲದೆ ಇತರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಮೇಳಗಳಿಗೆ ರಾಜ್ಯದ ಮಹಿಳೆಯರನ್ನು ನಿಯೋಜನೆ ಮಾಡುವ ಮೂಲಕ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುತ್ತಿದೆ.15 ವಿವಿಧ ರಾಜ್ಯ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸುತ್ತಿದ್ದು, 120 ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಪ್ರತ್ಯೇಕವಾಗಿ ಆಹಾರ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ 30 ಲೈವ್ ಫುಡ್ ಕೋರ್ಟ್ಗಳನ್ನುನ ಸ್ಥಾಪಿಸಲಾಗುತ್ತಿದೆ. ಈ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪ್ರತಿ ದಿನ ಬೆಳಿಗ್ಗೆ 10.30 ಯಿಂದ ರಾತ್ರಿ 9.30ರವರೆಗೆ ಮೇಳದ ಪ್ರದರ್ಶನಕ್ಕೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಮಂಗಳೂರಿನ ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಮೊಳಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧವಾದ ಆಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್ಗಳು, ಮಸಾಲಾ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು, ಬಾಳೆನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.
‘ಅಕ್ಕ-ಕೆಫೆ’ ಕಾರ್ಯಕ್ರಮದ ಭಾಗವಾಗಿ ಈ ಮೇಳದ ಮೈದಾನದಲ್ಲಿನ “ಅಕ್ಕ-ಕೆಫೆ” (ಅಕ್ಕಫುಡ್ ಕೋರ್ಟ್)ನಲ್ಲಿ ಶೀರ್ಷಿಕೆಯಡಿ ಆಕರ್ಷಣೀಯವಾಗಿ ಆಯೋಜಿಸಲಾಗುತ್ತಿದೆ.ವಿವಿಧ ತಿನಿಸುಗಳನ್ನು 30 ವಿವಿಧ ಮಳಿಗೆಗಳಲ್ಲಿ ಸ್ಥಳದಲ್ಲೇ ತಯಾರಿಸಿಕೊಡಲಾಗುವುದು.
ಪ್ರತಿ ದಿನ ಸಂಜೆ 6.30 ರಿಂದ 9.00 ಗಂಟೆಯವರೆಗೆ ಮೇಳದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ.ತರಬೇತಿ ಪ್ರತಿ ದಿನ ಬೆಳಿಗ್ಗೆ 11.30 ರಿಂದ 1.30 ರವರೆಗೆ ಮಹಿಳೆಯರು ಉದ್ಯಮ ಚಟುವಟಿಕೆ ಕೈಗೊಳ್ಳಲು ಬೆಂಬಲಿಸುವ ವಿವಿಧ ತರಬೇತಿ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್ ಫರೀದ್, ಸಚಿವರಾದ ದಿನೇಶ್ ಗುಂಡೂರಾವ್, ಶರಣ ಪ್ರಕಾಶ ಆರ್ ಪಾಟೀಲ್, ವಿರೋಧ ಪಕ್ಷದ ನಾಯಕ ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






