ಸುಳ್ಯ: ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ‘ಸಂಸ್ಕಾರ ವಾಹಿನಿ’ ಮಕ್ಕಳ ಬೇಸಿಗೆ ಶಿಬಿರ ಎ.11ರಿಂದ 15ರ ತನಕ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಚಾಲಕಿ ಶ್ರೀದೇವಿ ನಾಗರಾಜ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕಳೆದ ಎರಡು ದಶಕಗಳಿಂದ ಸಾವಿರಾರು ಕನಸುಗಳನ್ನು ಹೊತ್ತು ಸಾಗುತ್ತಿರುವ ಸಮಾಜಮುಖೀ ಸಂಸ್ಥೆ ‘ಶ್ರೀ ಚೆನ್ನಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’. ಧಾರ್ಮಿಕ ಕ್ಷೇತ್ರದಲ್ಲಿ
ತೊಡಗಿಸಿಕೊಂಡ, ಪೂರ್ಣ ಅಧ್ಯಯನ ಮಾಡಿದ ವೈದಿಕರು ಸದಾ ರಾಷ್ಟ್ರಪ್ರಜ್ಞೆಯನ್ನು ಹೃದಯಕ್ಕೆ ಆವಾಹಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಸಜ್ಜನ ಬಳಗ ಪ್ರತಿಷ್ಟಾನದ ಸಂಪನ್ಮೂಲ. ಧರ್ಮ ಸಂಸ್ಕೃತಿ, ಕಲೆ ಅನಾದಿ ಕಾಲದಿಂದಲೂ ಒಂದಕ್ಕೊಂದು ಪೂರಕವಾಗಿ ಬೆಳೆದು ಬಂದಿದೆ. ಮನುಷ್ಯನ ಬದುಕಿನಲ್ಲಿ ಸಚ್ಚಾರಿತ್ರ್ಯ ನಿರ್ಮಾಣಕ್ಕೆ ಇದೆಲ್ಲವೂ ಅತೀ ಅಗತ್ಯ ಧರ್ಮ ಸಂಸ್ಕೃತಿಗಳು ಬದುಕಿಗೆ ಒಳ್ಳೆಯ ಸಂಸ್ಕಾರ ನೀಡಿದರೆ, ಕಲೆ ಮನಸ್ಸಿಗೆ ಮುದ ನೀಡುತ್ತಾ ಸಾಮಾಜಿಕ ಬದುಕಿಗೆ ತನ್ನನ್ನು ಅಣಿಗೊಳಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಚಾರಿತ್ರ್ಯಪೂರ್ಣ ಬದುಕನ್ನು ಕಲಿಸುವ ಸಂಕಲ್ಪದೊಂದಿಗೆ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಎಲ್ಲಾ ವರ್ಗದವರಿಗೂ ಸಂಸ್ಕೃತದ ಶ್ಲೋಕಗಳು, ವೇದೋಪನಿಷತ್ತು ಮಂತ್ರಗಳು, ಪುರಾಣದ ಸಾರಗಳನ್ನು, ಭಗವದ್ಗೀತೆ, ಸಂಸ್ಕೃತ ಭಾಷಾ ಕಲಿಕೆ, ಭೋಜನ ಮಂತ್ರಗಳು, ಯೋಗಾಭ್ಯಾಸ ಹೀಗೆ ಹಲವಾರು ಸಂಸ್ಕಾರಗಳನ್ನು ಕಲಿಸುವ ಸದುದ್ದೇಶದಿಂದ ಪ್ರತಿ ವರ್ಷ ಸಂಸ್ಕಾರವಾಹಿನಿ ಶಿಬಿರ ಆಯೋಜಿಸಲಾಗುತ್ತದೆ.

ಪುರೋಹಿತ ನಾಗರಾಜ ಭಟ್ ಸಂಚಾಲಕತ್ವದ ಈ ಶಿಬಿರವು ವಿದ್ಯಾರ್ಥಿಗಳ ಸಂಸ್ಕಾರಯುತ ಬದುಕಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಹೇಳಿದರು.ಸಾಂಪ್ರಾದಾಯಿಕ ವಿಚಾರಗಳನ್ನು ಮೌಲ್ಯಗಳನ್ನು ಬೋಧಿಸುವುದರೊಂದಿಗೆ, ಭಿನ್ನ ಅಭಿರುಚಿಯ ಹಲವಾರು ಮಾಹಿತಿಗಳು, ಆದರ್ಶ ಪುರುಷರ ಕಥೆಗಳು, ಐತಿಹಾಸಿಕ ಘಟನೆಗಳು ಹೀಗೇ ಎಲ್ಲವನ್ನೂ ಒಟ್ಟಿಗೇ ಕಲಿಸುವ ನಿಶಿಶ್ಚತೆ ಈ ಶಿಬಿರದ್ದು.
ಒಂದು ವಾರದ ಕಾಲ ನಡೆಯಲಿರುವ ಈ ಶಿಬಿರಕ್ಕೆ ಈ ವರ್ಷವೂ 100 ಮಂದಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಉಚಿತ ಭೋಜನ, ಉಪಹಾರ, ಪಾಠ, ಪಠ್ಯ ಪುಸ್ತಕಗಳು ನೀಡಲಾಗುತ್ತಿದೆ.
ಹಲವಾರು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು, ವೇದ ವಿದ್ವಾಂಸರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದು, ವಿಷು ವಿಶೇಷ ಆಚರಣೆಯನ್ನು ಶಿಬಿರಾರ್ಥಿಗಳ ಜೊತೆಗೂಡಿ ಆಚರಿಸಲಿದ್ದಾರೆ.
ಎ.11ರಂದು ಪೂ10.30ಕ್ಕೆ ಶಿಬಿರವನ್ನು . ಸುಳ್ಯದ ದಂತವೈದ್ಯರಾದ ಡಾ. ವಿದ್ಯಾಶಾರದಾ ಉದ್ಘಾಟಿಸಲಿದ್ದಾರೆ. ಸಂಸ್ಕಾರವಾಹಿನಿ ಶಿಬಿರದ ಸಂಚಾಲಕಿ ಪಾರ್ವತಿ ಮುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ತಾಲೂಕು ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಉಪಸ್ಥಿತರಿದ್ದು ಶುಭಾಶಂಸನೆ ಮಾಡುವರು. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಚಾಲಕಿ ಶ್ರೀದೇವಿ ನಾಗರಾಜ್ ಶುಭಾಶಂಸನೆಯನ್ನು ಮಾಡಲಿದ್ದು, ದಿಕ್ಕೂಚಿ ಉಪನ್ಯಾಸವನ್ನು ನಿವೃತ್ತ ಕನ್ನಡ ಉಪನ್ಯಾಸಕಿ ಕುಸುಮಾ ಯು.ಬಿ. ನೆರವೇರಿಸಲಿದ್ದಾರೆ. ಎ.15ರಂದು ಅ.4ಕ್ಲೆ ಶಿಬಿರದ ಸಮಾಪನಾ ಸಮಾರಂಭವು ನಡೆಯಲಿದೆ. ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ.ಅನುರಾಧ ಕುರುಂಜಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಪ್ರಭಾ ಸುರೇಶ್ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಸಂಚಾಲಕಿ ಪಾರ್ವತಿ ಮುಳ್ಯ, ನಮಿತಾ ರಾವ್, ಪ್ರಭಾ ಸುರೇಶ್, ಸುಮಾ ಶಾಂತಿನಗರ ಉಪಸ್ಥಿತರಿದ್ದರು.