ಸುಳ್ಯ: ʼಸಂಸದರ ನಡೆ ಗ್ರಾಮದ ಕಡೆʼ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಇಂದು ಬೆಳಗ್ಗೆ ತಾಲೂಕಿನ ಬಾಳುಗೋಡು, ಮಧ್ಯಾಹ್ನ ಕಲ್ಮಕಾರು ಹಾಗೂ ಕೊಲ್ಲಮೊಗ್ರುವಿನಲ್ಲಿ ಕ್ಯಾ. ಚೌಟ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಆ ಬಳಿಕ ಸ್ಥಳೀಯರ ಕುಂದು-ಕೊರತೆ ಆಲಿಸಿದ್ದಾರೆ. ಈ ವೇಳೆ ಅನೇಕ ಸ್ಥಳೀಯ ನಾಗರಿಕರು ತಮ್ಮ ಊರಿನ ಸಮಸ್ಯೆಗಳನ್ನು ಸಂಸದರ
ಗಮನಕ್ಕೆ ತಂದಿದ್ದಾರೆ. ಸಂಸದರು ಕೂಡ ಎಲ್ಲರ ಕುಂದು-ಕೊರತೆಗಳನ್ನು ಆಲಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಬಾಳುಗೋಡು ಗ್ರಾಮದ ವಿವಿಧ ಪ್ರದೇಶಗಳಲ್ಲಿ ಹಕ್ಕುಪತ್ರ ಸಹಿತ ಮೂಲಸೌಲಭ್ಯ ವಂಚಿತರ ಸಮಸ್ಯೆ ಪರಿಹಾರಕ್ಕೆ ಅಲ್ಲಿನ ಜಾಗದ ಸಮಸ್ಯೆಯನ್ನು ಕಾನೂನು ರೀತಿಯಲ್ಲಿ ಬಗೆಹರಿಸಿ ಹಕ್ಕುಪತ್ರ ನೀಡಲು ಸಂಸದ ಕ್ಯಾ. ಬೃಜೇಶ್ ಚೌಟ ಸೂಚನೆ ನೀಡಿದರು. ಬಾಳುಗೋಡು ಗ್ರಾಮದ ದಿ. ತಮ್ಮಯ್ಯ ಗೌಡ ಕ್ರೀಡಾಂಗಣ ಮುಚ್ಚಾರ – ಬೆಟ್ಟುಮಕ್ಕಿಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಬಾಳುಗೋಡಿನ ಸೇರಿದಂತೆ

ಬಿಎಸ್ಎನ್ಎಲ್ ಟವರ್ಗಳಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ಬಾಳುಗೋಡು ಭಾಗದ ರಸ್ತೆಗಳನ್ನು ಕೇಂದ್ರದ ಯೋಜನೆಯಡಿ ಸೇರಿಸಿ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ಗಾಳಿಬೀಡು-ಕಡಮಕಲ್ ರಸ್ತೆಗೆ ಸಂಬಂಧಿಸಿದಂತೆ ನಾವು ಹಾಗೂ ಸುಳ್ಯ ಶಾಸಕರು ಈಗಾಗಲೇ ಮಡಿಕೇರಿ ಶಾಸಕರ ಜೊತೆ ಮಾತುಕತೆ ನಡೆಸಿದ್ದೇವೆ. ಮಡಿಕೇರಿ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಯಾವ ರೀತಿ ರಸ್ತೆ ನಿರ್ಮಿಸಬಹುದು ಎಂಬುದನ್ನು ತಿಳಿದು ಮುಂದುವರಿಯುತ್ತೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಕಿಲೋ ಮೀಟರ್ ರಸ್ತೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. 2018ರ ನಂತರ ಗ್ರಾಮ ಸಡಕ್ ಯೋಜನೆ ಬಂದಿರಲಿಲ್ಲ. ಕರಾವಳಿ, ಮಲೆನಾಡಿನಲ್ಲಿನ ಬೌಗೋಳಿಕತೆಯಿಂದ ಇಲ್ಲಿಗೆ ಪ್ರತ್ಯೇಕ ಮಾರ್ಗಸೂಚಿ ಬೇಕಾಗಿತ್ತು. ಅದರಂತೆ ನಾವು ಪ್ರಸ್ತಾವನೆ ಸಲ್ಲಿಸಿದ ಬಳಿಕ ಜಿಲ್ಲೆಯ ಹತ್ತು ಹಳ್ಳಿಗಳು ಪೋರ್ಟಲ್ ನಲ್ಲಿ ಎಂಟ್ರಿಗೆ ತೆರೆದುಕೊಂಡಿದೆ. ಹಾಗಾಗಿ ಈ ಭಾಗದ ಜನತೆಯ ಬೇಡಿಕೆ ಸರಿಯಾಗಿದೆ. ಈಗ ಈ ಹತ್ತು ಹಳ್ಳಿಗಳಿಗೆ ಯೋಜನೆಯ ವರದಿ ತಯಾರಿಸಿ 44 ಕಿ.ಮೀ. ರಸ್ತೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಿನಯ್ ಮುಳುಗಾಡು, ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಸುಳ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಮಲೆನಾಡು ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ, ಸುಳ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಸಹಕಾರ ಭಾರತಿ ಸುಳ್ಯ ತಾಲೂಕು ಒಕ್ಕೂಟ ಅಧ್ಯಕ್ಷ. ಡಾ. ಸೋಮಶೇಖರ್ ಕಟ್ಟೆಮನೆ, ಬಿಜೆಪಿ ಬೂತ್ ಸಮಿತಿ ಬಾಳುಗೋಡು ಅಧ್ಯಕ್ಷ ರಾಧಾಕೃಷ್ಣ ಕಟ್ಟೆಮನೆ, ಜಯಂತ ಬಾಳುಗೋಡು ಮತ್ತಿತರರು ಉಪಸ್ಥಿತರಿದ್ದರು.ಚಂದ್ರಹಾಸ ಶಿವಾಲ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ರಾಧಾಕೃಷ್ಣ ಕಟ್ಟೆಮನೆ ವಂದಿಸಿದರು. ಲೋಹಿತ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.













