ಸುಳ್ಯ:ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಹೊಸತಾಗಿ ಅಸ್ತಿತ್ವಕ್ಕೆ ಬಂದಿರುವ ಸಮನ್ವಯ ಸಹಕಾರಿ ಬಳಗದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಸಮನ್ವಯ ಸಹಕಾರಿ ಬಳಗದ ಮುಖಂಡರು ತಿಳಿಸಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಮುಖಂಡರಾದ ಧನಪಾಲ ಕೆ. ಆರ್. ಹಾಗೂ ಮನೀಶ್ ಕಳೆದ ಹಲವಾರು ವರ್ಷಗಳಿಂದ ಸಂಘದಲ್ಲಿರುವ ಎಲ್ಲಾ
ವರ್ಗದ ಸದಸ್ಯರುಗಳಿಗೆ ಚುನಾವಣೆಯಲ್ಲಿ ಅವಕಾಶ ಸಿಗುತ್ತಿಲ್ಲ. ಆದುದರಿಂದ ಎಲ್ಲರಿಗೂ ಅವಕಾಶ ಸಿಗಬೇಕು ಎಂಬ ನೆಲೆಯಲ್ಲಿ ಸಮಾನ ಮನಸ್ಕರು ಸೇರಿ ಸಮನ್ವಯ ಸಹಕಾರಿ ಬಳಗವನ್ನು ಅಸ್ತಿತ್ವಕ್ಕೆ ತಂದಿದ್ದೇವೆ ಮತ್ತು ಈ ಭಾರಿಯ ಸಂಘದ ಚುನಾವಣೆಯಲ್ಲಿ ನಮ್ಮ ಸದಸ್ಯರುಗಳನ್ನು ಸ್ಪರ್ಧೆಗೆ ನಿಲ್ಲಿಸಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವಜನತೆಗೆ, ಮಹಿಳೆಯರಿಗೆ,ದಲಿತ ಸಮುದಾಯದವರಿಗೆ, ಕಾರ್ಮಿಕರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತಿಲ್ಲ.
ಸಂಘದಲ್ಲಿ 3 ಸಾವಿರಕ್ಕೂ ಹೆಚ್ಚು ಸದಸ್ಯರುಗಳು ಇದ್ದು ಚುನಾವಣೆಯ ಸಂಧರ್ಭ ಮತದಾನ ಪಟ್ಟಿಯಲ್ಲಿ ಕೇವಲ 672 ಮಂದಿಯ ಹೆಸರುಗಳು ಮಾತ್ರ ಕಂಡು ಬರುತಿದೆ ಎಂದರು. ಚುನಾವಣೆಗೆ ಸಂಘದ ಬೈಲಾ ಹಾಗೂ ಸಹಕಾರಿ ಸಂಘಗಳ ಕಾಯ್ದೆಯನುಸಾರ ಮತದಾನ ಹಕ್ಕುಳ್ಳ ಅರ್ಹ ಸದಸ್ಯರ ಕರಡು ಪಟ್ಟಿ ಮಾಡದೆ ಸಂಘದ ಸದಸ್ಯರ ಜನಸಂಖ್ಯೆಯ ಶೇಕಡಾ 20 ಕ್ಕಿಂತಲೂ ಕಡಿಮೆ ಇರುವಂತೆ ಮತದಾರರ ಪಟ್ಟಿ ರಚಿಸಿ ತಮಗೆ ಬೇಕಾದಂತೆ ಮಾಡಿಕೊಳ್ಳುತಿದ್ದಾರೆ. ಈ ಹಿನ್ನಲೆಯಲ್ಲಿ ನಾವೆಲ್ಲಾರು ಸೇರಿ ಪ್ರಜಾಪ್ರಭುತ್ವ ನೆಲೆಯಲ್ಲಿ ಸಹಕಾರಿ ರಂಗವನ್ನು ಉಳಿಸುವ ದ್ವೇಯನಿಷ್ಠೆಯೊಂದಿಗೆ ಈ ಬರುವ ಡಿ.23 ರಂದು ನಡೆಯುವ ಸೊಸೈಟಿ ಚುನಾವಣೆಯಲ್ಲಿ ಸಮನ್ವಯ ಸಹಕಾರಿ ಬಳಗ ವು ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದೇವೆ.ಅಲ್ಲದೆ ಆಸಕ್ತಿಯುಳ್ಳ ಎಲ್ಲಾ ವಿಭಾಗದವರಿಗೂ ಅವಕಾಶ ಸಿಗುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ ಎಂದು ಧನಪಾಲ ಹಾಗೂ ಮನೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರುಗಳಾದ ವರಧರಾಜ್ ಸಂಕೇಶ್, ಗಣೇಶ್ ಎಸ್ ಪಿ, ಯೋಗಿಶ್ ದಂಡಕಜೆ, ಚಂದ್ರಶೇಖರ ಪಿ ಎಸ್ ,ಸನತ್ ಪೆರಂಗೋಡಿ, ಕುಶಾಲಪ್ಪ ಪೇರಡ್ಕ, ಶಿವಪ್ರಸಾದ್ ಗೂನಡ್ಕ, ದೀಪಕ್ ಪೇರಡ್ಕ, ಬಾಲಚಂದ್ರ ಪೆಲ್ತಡ್ಕ, ಸುಧಾಕರ ಪೆಲ್ತಡ್ಕ, ಲೋಹಿತ್ ದೊಡ್ಡಡ್ಕ
ಮನೋಜ್ ಗೂನಡ್ಕ ,ಬೈಲೆ ಹೊನ್ನಪ್ಪ ಕೆ.ಕೆ,ಸುರೇಶ್ ಕಡೆಪಾಲ, ರೇಶ್ಮ ಪಿ.ಕೆ, ಶ್ವೇತ ವರಧರಾಜ್ ,ಕವಿತ ಪೆರಂಗೋಡಿ,ಶುಭಲತ ಪೆರಂಗೋಡಿ ,ಅನನ್ಯ ಮನೋಜ್ ,ಶ್ರೀನಿಧಿ ಕದಿಕಡ್ಕ ,ಜಗದೀಶ್ ದೊಡ್ಡಡ್ಕ,ಅನಿಲ್ ಗೂನಡ್ಕ ಉಪಸ್ಥಿತರಿದ್ದರು.