ಕೋಲಾರ: ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ 207 ನೇ ಹುಣ್ಣಿಮೆ ಹಾಡು ಪ್ರಯುಕ್ತ ಹಮ್ಮಿಕೊಂಡಿದ್ದ ಏಕವ್ಯಕ್ತಿ ರಂಗ ಪ್ರಯೋಗ ನಾಟಕ “ತಪ್ತ” ಜನರ ಮನಸೂರೆಗೊಂಡಿತ್ತು.ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಡಾ.ಉಮ್ಮರ್ ಬೀಜದಕಟ್ಟೆ ಮಾತನಾಡಿ, ಮನುಷ್ಯರು ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ
ಸ್ವತಂತ್ರವಾಗಿ ಬದುಕು ನಡೆಸಲು ಸಾಧ್ಯ ಎಂದು ಹೇಳಿದರು. ಆದಿಮ ಸಾಂಸ್ಕೃತಿಕ ಕೇಂದ್ರ ಸುಭದ್ರ ಸಾಂಸ್ಕೃತಿಕ ರಕ್ಷಣಾ ತಳಹದಿಯೊಂದನ್ನು ನಿರ್ಮಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ.ನಾಯಕ (ಅಮಾಸ), “ನನ್ನನ್ನು ಈ ಅದಿಮ ನೆಲ ಒಬ್ಬ ಮನುಷ್ಯನನ್ನಾಗಿ, ಕಲಾವಿದನನ್ನಾಗಿ ರೂಪಿಸಿದೆ. ಆದಿಮ ನನ್ನ ಪಾಲಿಗೆ ತಾಯಿ ಮಡಿಲು. ನಾನು ಅಮಾಸ ಎಂಬ ಸಂಸ್ಥೆ ಕಟ್ಟಿರಬಹುದು, ಅದಕ್ಕಿಂತ ಆದಿಮ ಕೇಂದ್ರವೇ ನನಗೆ ಮುಖ್ಯ, ಎಂತವರನ್ನು ಕೈ ಹಿಡಿದು ಮುನ್ನಡೆಸುವ ಶಕ್ತಿ ಆದಿಮಕ್ಕೆ ಇದೆ. ಇದೊಂದು ಶಕ್ತಿ ಕೇಂದ್ರವೇ ಹೊರತು ವ್ಯಕ್ತಿ ಕೇಂದ್ರವಲ್ಲ ಎಂದರು.
ಬೀಜದಕಟ್ಟೆ ಅಭಿಮಾನಿಗಳ ಬಳಗದ ಅಧ್ಯಕ್ಷ ನಟರಾಜು ಬಿ ಮಾತನಾಡಿ, ‘ಆದಿಮ ಕೇಂದ್ರವು ನೆಲ, ಜಲ, ದೇಶ, ಭಾಷೆಗೆ ಸಂಬಂಧಿಸಿ ಸಮಾಜವನ್ನು ಜಾಗೃತಿಗೊಳಿಸುವ ಕೆಲಸದಲ್ಲಿ ತೊಡಗಿದೆ. ಬೆಟ್ಟದ ಮೇಲೆ ಇಂತಹ ಸುಂದರ ವಾತಾವರಣ ನಿರ್ಮಿಸಿರುವುದು ಅದ್ಭುತವೇ ಸರಿ. ಸಾಂಸ್ಕೃತಿಕ ಚಿಂತನೆಯೊಂದಿಗೆ ನಾಟಕ ಹಾಗೂ ಇನ್ನಿತರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಜಾಗೃತಿಗೊಳಿಸುತ್ತಿದೆ’ ಎಂದರು.
ಕೋಲಾರದ ಆದಿಮ ಕೇಂದ್ರದಲ್ಲಿ ನಡೆದ ಏಕವ್ಯಕ್ತಿ ರಂಗ ಪ್ರಯೋಗ ” ನಾಟಕಕಾರ ಶಿವು ಶಿರಾದಡು ಮಾತನಾಡಿದರು. ಗುಂಡಪ್ಪ ದೇವಿಕೇರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ, ಕಲಾವಿದ ಅಮಿತ್ ಸ್ವಾಗತ ಕೋರಿದರು.
ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಯ ಸಹಕಾರದಲ್ಲಿ ನಡೆದ ಈ ನಾಟಕವನ್ನು ಶಿವು ಶಿರಾದಡು ರಚಿಸಿದ್ದಾರೆ. ವಿದ್ಯಾರಾಣಿ ಎ.ಎನ್ (ಸಹಾಯ), ಜಗದೀಶ್ ಆರ್ (ಸಂಗೀತ) ಮಧು ಎಂ (ನಿರ್ದೇಶನ ಮತ್ತು ವಿನ್ಯಾಸ), ವಿಶ್ವನಾಥ ಎಚ್. ಎಂ (ರಂಗದ ಮೇಲೆ) ಸಹಾಯದಲ್ಲಿ ವಿಶ್ವರಂಗ ತಂಡ ಅರ್ಪಿಸಿರುವ ನಾಟಕ ಇದಾಗಿದೆ.
ಕಾರ್ಯಕ್ರಮದಲ್ಲಿ ಗಂಗನಘಟ್ಟ ವೆಂಕಟಸ್ವಾಮಿ, ಆದಿಮ ಹ.ಮಾ. ರಾಮಚಂದ್ರ. ಡಾ.ಮುರಳಿ. ಆನೇಕಲ್ ಭವ್ಯಾ, ಶಶಿ ಬೆಂಗಳೂರು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.