ಸುಳ್ಯ:ಹಲವು ರೀತಿಯಲ್ಲಿ ನಾಶದತ್ತ ಸಾಗುತ್ತಿರುವ ಭಾಷೆಗಳನ್ನು ಹಾಗೂ ಕರ್ನಾಟಕದ ಬುಡಗಟ್ಟು ಜನಾಂಗದ ಹಾಗೂ ನಿರ್ಲಕ್ಷಿತ ಭಾಷೆಗಳ ಉಳಿವಿಗಾಗಿ ಹಂತ ಹಂತವಾಗಿ ಸರಕಾರ ಅಕಾಡೆಮಿಗಳನ್ನು ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ ಕೆ.ಆರ್.ತೇಜಕುಮಾರ್ ಬಡ್ಡಡ್ಕ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆದ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಾಕೃತಿಕ ದಟ್ಟಣೆಯು ವಿರಳವಾಗುತ್ತಿರುವಂತೆ ನಾವುಗಳು ವಿಕಾಸದಿಂದ ವಿನಾಶದೆಡೆಗೆ ಸಾವಧಾನದ ಹೆಜ್ಜೆ ಇರಿಸುತ್ತಿದ್ದೇವೆ. ಭಾಷೆಗಳ ಅಳಿವಿನೊಂದಿಗೆ ಸಂಸ್ಕೃತಿಗಳೂ ನಾಶವಾಗುತ್ತಿವೆ. ಈ ಸತ್ಯವನ್ನರಿಯಲು ನಾವು ದೂರದತ್ತ ದೃಷ್ಟಿ ಬೀರುವ ಅಗತ್ಯವಿಲ್ಲ. ನಮ್ಮ ಸುತ್ತ ನೋಡಿದರೆ ಅದು ಅರ್ಥವಾಗಬಲ್ಲದು. ನಮ್ಮೂರ ಸಾಹಿತ್ಯದ ಉನ್ನತಿಗೆ ಕಾರಣವಾಗಿದ್ದು ಇಲ್ಲಿನ ಜನರಾಡುವ ವಿಭಿನ್ನ ಭಾಷೆಗಳ ಸೊಗಡೆಂಬುದರಲ್ಲಿ ಸಂಶಯವಿಲ್ಲ. ಅದೆಲ್ಲ ನಮ್ಮೂರ ಭಾಷೆಗಳೀಗ ವಿರಳವಾಗುತ್ತಿದೆ. ಇಲ್ಲಿನ ಪ್ರಾದೇಶಿಕ ಭಾಷೆಗಳು ಕ್ಷೀಣಿಸುತ್ತಾ ಸಾಗುತ್ತಿವೆ. ಆಳುವ ಸರ್ಕಾರಗಳು ಇಂದು

ಅಕಾಡಮಿಗಳನ್ನು ಸ್ಥಾಪಿಸಿ ಭಾಷೆಗಳ ಉಳಿಯುವಿಕೆಗಾಗಿ ಶ್ರಮಿಸುತ್ತಿವೆ. ಇಲ್ಲಿನ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆಗಳಿಗೆ ಅಕಾಡೆಮಿಗಳಿವೆ. ಆದರೆ ಇಲ್ಲಿಯ ಕರಾವಳಿಯುದ್ದಕ್ಕೂ ಅಂದರೆ ದ.ಕ.ದಿಂದ ಕಾರವಾರ ತನಕ ಪ್ರಚಲಿತದಲ್ಲಿರುವ ಸ್ಥಳೀಯ ಭಾಷೆಗಳು ಕರ್ನಾಟಕದ ಉದ್ದಗಲಕ್ಕೂ ಹರಡಿ ನಿಂತಿರುವ ಹತ್ತು ಹಲವು ಬುಡಗಟ್ಟು ಪಂಗಡಗಳನ್ನು ಕಾಣಬಹುದು. ಅವರುಗಳಲ್ಲಿ ಕೆಲವಾರು ಭಾಷೆಗಳು ಈಗಾಗಲೇ ಇಲ್ಲವಾಗಿವೆ. ಅವರ ಭಾಷೆಗಳೀಗ ಸೊರಗಿ ಬಡವಾಗಿದೆ. ಹಲವಾರು ನಿರ್ಲಕ್ಷಿತ ಭಾಷೆಗಳೂ ಇದೇ ಹಂತದಲ್ಲಿದೆ. ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೂ ಹಂತ ಹಂತವಾಗಿ ಅಕಾಡೆಮಿಗಳು ಸ್ಥಾಪಿತಗೊಳ್ಳುವ ಅವಶ್ಯಕತೆ ಇಂದಿದೆ. ಅದು ಸಂಸ್ಕೃತಿಗಳ ಉಳಿವಿಗೆ ಅನಿವಾರ್ಯವೂ ಹೌದು ಎಂದು ಹೇಳಿದರು.
ಸಾಹಿತ್ಯ ಸೃಷ್ಟಿಯಲ್ಲಿ ಬರಹಗಾರನ ಅನುಭವವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು ನಮಗೆ ತಿಳಿದಿರದ ಯಾವುದೋ ಒಂದನ್ನು ಬರೆದಾಗ ಅದು ನೈಜವಾಗಿ ಮೂಡಿ ಬರುವುದಿಲ್ಲ ಎನ್ನುವುದು ಸತ್ಯ, ನಮ್ಮರಿವಿನ ಬರಹದಲ್ಲಿ ನಿಖರತೆಯಿರುತ್ತದೆ. ಜೀವನಾನುಭವದ ಪಕ್ವತೆ, ದಣಿವರಿಯದ ಓದು ಹಾಗೂ ವಿಶಾಲ ವೀಕ್ಷಣೆಯಿಂದ ಸಾಹಿತಿ ಯಶಸ್ಸು ಗಳಿಸಬಹುದು ಎಂದರು.

ಸುಮಾರು ಇನ್ನೂರರಷ್ಟು ಭಾಷೆಗಳು ಇನ್ನೊಂದು ಅರವತ್ತರಿಂದ ಎಂಭತ್ತು ವರ್ಷಗಳಲ್ಲಿ ನಶಿಸಿಹೋಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆ ಭಾಷೆಗಳ ಸಾಲಿನಲ್ಲಿ ನಮ್ಮ ಕನ್ನಡವೂ ಇದೆ ಎಂಬುದು ಆತಂಕಕಾರಿ. ಸರಿಸುಮಾರು ಹತ್ತೊಂಭತ್ತು ಸಾವಿರದಷ್ಟಿದ್ದ ಭಾರತದ ಭಾಷೆಗಳಲ್ಲಿ ಅವೆಷ್ಟೋ ನಶಿಸಿಹೋಗಿವೆ. ಅಷ್ಟೊಂದು ಭಾಷೆಗಳು ಇನ್ನಿಲ್ಲವಾಗುತ್ತಿರುವಾಗ ಹೊಸದೊಂದು ಭಾಷೆ ಸೃಷ್ಟಿಯಾಗಿದೆಯೆಂಬ ಯಾವುದೇ ಕುರುಹುಗಳು ಕಂಡು ಬರುವುದಿಲ್ಲ. ಹಾಗಿದ್ದರೂ ಹೊಸದಾದ ಭಾಷೆಯೊಂದನ್ನು ಅವಿಷ್ಕಾರಗೊಳಿಸಿ ಬಹುತೇಕ ಯಶಸ್ಸು ಕಂಡ ಈ ಮಣ್ಣಿನ ವ್ಯಕ್ತಿಗಳನ್ನು ಮರೆಯುವಂತಿಲ್ಲ ಎಂದರು.

















