ಸುಳ್ಯ:ಯಾವುದೇ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ ನಮ್ಮ ಹಿರಿಯರು ಕಟ್ಟಿದ ಕಲಾ, ಸಾಹಿತ್ಯ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಲು ನಮ್ಮ ಯುವ ಜನಾಂಗ ಎಡವುತ್ತಿರುವುದು ಖೇದಕರ ಎಂದು ಹಿರಿಯ ಸಾಹಿತಿ ಸುರೇಶ್ ಕಂಜರ್ಪಣೆ ಅಭಿಪ್ರಾಯಪಟ್ಟಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾಸಂಸ್ಥೆಯಲ್ಲಿ ನಡೆದ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು

ಉದ್ಘಾಟಿಸಿ ಅವರು ಮಾತನಾಡಿದರು. ಹೊಸ ತಲೆಮಾರನ್ನು ಸಾಹಿತ್ಯ, ಕಲೆಯೆಡೆಗೆ ಆಕರ್ಷಿತವಾಗುವ ಮತ್ತು ಪ್ರೇರೇಪಿಸುವಂತೆ ಶಿಕ್ಷಣ, ಸಾಹಿತ್ಯ ಬೇಕು. ಆಗ ಮಾತ್ರ ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಲು ಸಾಧ್ಯ ಎಂದು ಅವರು ಹೇಳಿದರು. ಸೃಜನಶೀಲ ಮನಸ್ಸಿಗೆ ನೀರೆರೆಯುವ ಕೆಲಸ ಆಗಬೇಕು ಎಂದ ಅವರು ಸುಳ್ಯ ತಾಲೂಕಿನಲ್ಲಿ 16 ಶಾಲೆಗಳು ಸೇರಿ ರಾಜ್ಯದಲ್ಲಿ 3200 ಶಾಲೆಗಳು ಶತಮಾನ ಕಂಡಿದೆ. ಆ ಶಾಲೆಗಳ ವೈಭವವನ್ನು ಮತ್ತೆ ಮರುಕಳಿಸಬೇಕು ಎಂದು ಕರೆ ನೀಡಿದರು. ಉಳಿದ ದೇಶಗಳಲ್ಲಿ ಅವರದ್ದೇ ಭಾಷೆಗಳಲ್ಲಿ ಸಂಶೋಧನೆ, ಸಾಧನೆ ಮಾಡುತ್ತಿದ್ದರೆ, ಭಾರತ ಮಾತ್ರ ಇನ್ನೂ ಇಂಗ್ಲೀಷ್ ಎಂಬ ವಸಾಹತುಶಾಹಿ ದಾಸ್ಯ ಮಾನಸಿಕತೆಗೆ ಒಳಗಾಗಿದೆ. ಈ ಮಾನಸಿಕತೆಯಿಂದ ಹೊರ ಬಂದು ನಮ್ಮ ಭಾಷೆ,ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಯುವ ತಲೆಮಾರಿಗೆ ತಿಳಿಸಿ ನಮ್ಮ ಬೇರುಗಳನ್ನು ಗಟ್ಟಿಗೊಳಿಸಬೇಕು ಎಂದರು.
ಹಿರಿಯ ಸಾಹಿತಿ ಕೆ.ಆರ್.ತೇಜಕುಮಾರ್ ಬಡ್ಡಡ್ಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಸುಳ್ಯ ತಾಲೂಕು ಸಮೃದ್ಧ ಸಾಹಿತ್ಯ ನೆಲ, ಈ ಸಾಹಿತ್ಯ ಪರಂಪರೆ ಮುಂದುವರಿಯಲು ಯುವ ಜನತೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಬೇಕು, ಹೊಸ ಹೊಸ ಸಾಹಿತ್ಯ ರಚನೆಯಾಗಬೇಕು ಎಂದು ಹೇಳಿದರು. ಸಾಹಿತ್ಯ ಸಮಾಜವನ್ನು ಪರುವರ್ತನೆ ಮಾಡುತ್ತದೆ. ಎಲ್ಲಾ ಪಿಡುಗುಗಳಿಂದಲೂ ದೂರ ಮಾಡಿ ಸಮಾಜವನ್ನು ಸುಶಿಕ್ಷೀತವಾಗಿಡಲು, ಸಂರಕ್ಷಣೆ ಮಾಡಲು ಭಾಷೆ, ಸಾಹಿತ್ಯ ಪೂರಕ ಎಂದು ಹೇಳಿದರು.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೊಸ ಕೃತಿಗಳ ಬಿಡುಗಡೆ ಮಾಡಿ ಮಾತನಾಡಿ ‘ಸಾಹಿತಿಗಳ ತವರೂರು ಚೊಕ್ಕಾಡಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಅರ್ಥ ಪೂರ್ಣ ಎಂದು ಹೇಳಿದರು. ಓದುಗರ ಸಂಖ್ಯೆ ಹೆಚ್ಚಾಗಬೇಕು ಆಗ ಪುಸ್ತಕಗಳ ರಚನೆ, ಸಾಹಿತಿಗಳ ಸೃಷ್ಠಿ ಇನ್ನಷ್ಟು ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.
ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆಯ ಸಂಚಾಲಕ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿದರು.
ಕಸಾಪ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಸಮ್ಮೇಳನದ ಆಶಯ ನುಡಿಗಳನ್ನಾಡಿದರು. ನಿಕಟ ಪೂರ್ವಾಧ್ಯಕ್ಷೆ ಲೀಲಾ ದಾಮೋದರ ಮಾತನಾಡಿದರು.

ಸಮ್ಮೇಳನದ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ಚಾಲನೆ ನೀಡಿದ ತಹಶೀಲ್ದಾರ್ ಮಂಜುಳ.ಎಂ
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಸ್ತು ಪ್ರದರ್ಶನ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಶ್ರೀನಾಥ ಎಂ.ಪಿ. ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಕಸಾಪ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ,ಸಮ್ಮೇಳನ ಸ್ವಾಗತ

ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ಪ್ರಸಾದ್ ಮಾಡಬಾಕಿಲು, ಕೋಶಾಧಿಕಾರಿ ಅರುಣ ಕುಮಾರ ಮುಂಡಾಜೆ, ಕಸಾಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ, ಕೋಶಾಧಿಕಾರಿ ದಯಾನಂದ ಆಳ್ವ, ಕಸಾಪ ಕೊಡಗು ಜಿಲ್ಲಾಧ್ಯಕ್ಷ ಕೇಶವ ಕಾಮತ್, ಸುಳ್ಯ ಹೋಬಳಿ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಉಪಸ್ಥಿತರಿದ್ದರು.
ಸ್ಮರಣ ಸಂಚಿಕೆ ಕುರಿತು ಸಂಪಾದಕ ರಾಮಕೃಷ್ಣ ಭಟ್ ಚೂಂತಾರು ಮಾತನಾಡಿದರು. ಸಾಹಿತಿ ಎ.ಕೆ.ಹಿಮಕರ ಸಮ್ಮೇಳನಾಧ್ಯಕ್ಷರ ಪರಿಚಯ ಮಾತನಾಡಿದರು.

















