ಸುಳ್ಯ:ಹೈನುಗಾರಿಕಾ ಕ್ಷೇತ್ರದಲ್ಲಿ ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ಮಂದಿ ಕೃಷಿಕರು ತೊಡಗಿಸಿ ಕೊಂಡಿದ್ದಾರೆ. ಮುಂದೊಂದು ಹೈನುಗಾರಿಕೆಯಲ್ಲಿ, ಹಾಲೂ ಉತ್ಪಾದನೆಯಲ್ಲಿ ಸುಳ್ಯ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು
ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ ವತಿಯಿಂದ ಸೆ.2ರಂದು ಸುಳ್ಯದ ಪಶುಪಾಲನಾ ಇಲಾಖಾ ಕಚೇರಿಯಲ್ಲಿ ನಡೆದ ರಬ್ಬರ್ ನೆಲಹಾಸು ವಿತರಣೆ, ಉಚಿತ ರೇಬಿಸ್ ಲಸಿಕೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪಶು ಸಖಿಯರಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರದಿಂದ ನೀಡುವ ಸೌಲಭ್ಯಗಳನ್ನು ಬಳಸಿ ಹೈನುಗಾರಿಕೆಯನ್ನು ಯಶಸ್ವಿಯಾಗಿ ಮಾಡಿ ಎಂದು ಕರೆ ನೀಡಿದ ಅವರು ರೈತರ ಎಲ್ಲಾ ಸಮಸ್ಯೆಗಳಿಗೆ ಇಲಾಖೆಯ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸ್ಪಂದಿಸಬೇಕು.ಎಲ್ಲಾ ಸಾಕು ಪ್ರಾಣಿಗಳ ರಕ್ಷಣೆ ಮಾಡುವ ಕಾರ್ಯವನ್ನು ಇಲಾಖೆ ಮಾಡುತಿದೆ. ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಮಾತನಾಡಿದರು. ಪಶುವೈದ್ಯಾಧಿಕಾರಿಗಳಾದ ಡಾ.ನಾಗರಾಜ, ಡಾ. ವೆಂಕಟಾಚಲಪತಿ ಜೆ.ಎನ್.
ಡಾ.ಸೂರ್ಯನಾರಾಯಣ ಬಿ.ಕೆ, ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ್ ಕೆ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಮಹೇಶ್ ಕುಮಾರ್ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.