ಸುಳ್ಯ:ರಬ್ಬರು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ,
ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ರಾಜ್ಯದ
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ರಬ್ಬರು ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.ಪ್ರಸಕ್ತ ರಾಜ್ಯದಲ್ಲಿ ಸುಮಾರು 60,000 ಹೆಕ್ಟರ್ ವಿಸ್ತೀರ್ಣದಲ್ಲಿ ರಬ್ಬರು ಕೃಷಿಯು ಇರುತ್ತಿದ್ದು ಮೇಲ್ಕಾಣಿಸಿದ ಜಿಲ್ಲೆಗಳ ಆರ್ಥಿಕತೆಯಲ್ಲಿ ರಬ್ಬರು ಕೃಷಿ ಕೂಡಾ ಪ್ರಮುಖ ಪಾತ್ರ ವಹಿಸುತ್ತಿದೆ. ರಬ್ಬರು ಕೃಷಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಕುರಿತು ಅಧ್ಯಯನ ಮಾಡಿ ಪರಿಹಾರೋಪಾಯ ಕಂಡುಕೊಳ್ಳಲು ವರದಿ ತಯಾರಿಸುವಂತೆ ನಾವು ಕೋರಿಕೊಂಡ ಮೇರೆಗೆ ಹಿರಿಯ ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ ಇವರು ವರದಿ ತಯಾರಿಸಿದ್ದು ಅ ವರದಿಯ ಪ್ರತಿಯನ್ನು ಇದರೊಂದಿಗೆ ಸಲ್ಲಿಸಲಾಗಿದ್ದು ಈ ವರದಿಯಲ್ಲಿ ಹಲವಾರು ಪರಿಹಾರೋಪಾಯಗಳನ್ನು ಸದ್ರಿಯವರು ಸೂಚಿಸಿದ್ದು ಕೇಂದ್ರ, ರಾಜ್ಯ ಸರಕಾರಗಳು ಬೆಳೆಗಾರರ ಹಿತರಕ್ಷಣೆಗಾಗಿ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ರಬ್ಬರನ್ನು ಕೃಷಿಯೆಂದು ಪರಿಗಣಿಸಿ ಬೆಳೆ ವಿಮೆ ಇತ್ಯಾದಿ ಸೌಲಭ್ಯಗಳು ರಬ್ಬರು ಕೃಷಿಕರಿಗೂ ದೊರಕುವಂತೆ ಕ್ರಮ ಕೈಕೊಳ್ಳಬೇಕು, ಕೇರಳ ಸರಕಾರವು 2015-16ನೇ ಸಾಲಿನಿಂದ ಬೆಳೆಗಾರರ ರಕ್ಷಣೆಗೋಸ್ಕರ ‘ರಬ್ಬರು ಉತ್ಪಾದನಾ ಪ್ರೋತ್ಸಾಹಧನ ಯೋಜನೆ’ ಎಂಬ ಶಿರೋನಾಮೆಯಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ಸದರಿ ಯೋಜನೆ ಮುಂದುವರಿಕೆಯಾಗಿ 2025-26ನೇ ಸಾಲಿನಲ್ಲಿಯೂ ಕಿಲೋ ಒಂದರ ರೂ.200/-ರಂತೆ ಧಾರಣೆ ನಿಗಧಿಪಡಿಸಿ ಸಣ್ಣ ರೈತರಿಗೆ ಬೆಂಬಲ ಬೆಲೆ ಘೋಷಿಸಿರುತ್ತಿದ್ದು ನ.1ರಿಂದ ಈ ಯೋಜನೆಯಂತೆ ರಬ್ಬರು ಖರೀದಿ ಪ್ರಾರಂಭಿಸಲು ಆದೇಶ ನೀಡಿರುತ್ತದೆ. ರಾಜ್ಯ ಸರಕಾರವೂ ಕೂಡ ಇದೇ ರೀತಿಯ ಯೋಜನೆ ಹಾಕಿಕೊಳ್ಳಬೇಕು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಂತರಿಕವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಬೆಳೆಗಾರರನ್ನು ರಕ್ಷಿಸುವ ಉದ್ದೇಶದಿಂದ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಬೇಕು. ರಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗಧಿ ಮಾಡಿ ಮಾರುಕಟ್ಟೆ ಮಧ್ಯಪ್ರವೇಶಿಸಬೇಕು ಎಂದು ವಿನಂತಿಸಲಾಗಿದೆ.
ನಿಯೋಗದಲ್ಲಿಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ರಬ್ಬರು ಮಂಡಳಿ ಸದಸ್ಯ ಮುಳಿಯ ಕೇಶವ ಭಟ್,ಅನಂತ ಭಟ್ ಮಚ್ಚಿಮಲೆ,ರಾಜು ಶೆಟ್ಟಿ,ವಿಜಯ ಕೃಷ್ಣ ಪೆರಾಜೆ,ರಾಕೇಶ್ ಮೆಟ್ಟಿನಡ್ಕ ಉಪಸ್ಥಿತರಿದ್ದರು.












