ಸುಳ್ಯ:ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕೆಳಭಾಗದಲ್ಲಿ ಹಾದು ಹೋಗಿ ಸಂತೋಷ್ ಚಿತ್ರ ಮಂದಿರದ ಬಳಿ ಸೇರುವ ಬಹು ಉಪಯೋಗಿ ರಸ್ತೆಯ ಕೆಲವು ಭಾಗ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ರಸ್ತೆಯಲ್ಲಿ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿ ಮಾಡಬೇಕು ಎಂದು ಸಾರ್ವಜನಿಕರು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸುಳ್ಯದ ಹೃದಯಭಾಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ
ಕೆಳಭಾಗದಲ್ಲಿ ಹಾದುಹೋಗಿ ಸಂತೋಷ್ ಥಿಯೇಟರ್ ಬಳಿ ಸೇರುವ ನಾವೂರು ರಸ್ತೆಯು ಸುಮಾರು 1.5 ಕಿ.ಮೀ. ಉದ್ದವಿದೆ. ಈ ಪೈಕಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದರೂ ಸುಳ್ಯ ಬಸ್ನಿಲ್ದಾಣದ ಎದುರುಗಡೆ ಸುಮಾರು 80 ಮೀ.ನಷ್ಟು ರಸ್ತೆಯು ಅಭಿವೃದ್ಧಿ ಕಾಣಲು ಬಾಕಿ ಉಳಿದಿದೆ. ಆ ಭಾಗದ ರಸ್ತೆಯು ಮಳೆನೀರು ಹರಿದು ಹೊಂಡಗುಂಡಿಗಳಿಂದ ಕೂಡಿದ್ದು ಸದ್ರಿ ರಸ್ತೆಯಲ್ಲಿ ವಾಹನಗಳ ಒಡಾಟಕ್ಕೆ
ಕಷ್ಟಕರವಾಗಿದೆ. ನಡೆದಾಡಲು ಕೂಡ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಈ ಭಾಗದ ಹಲವು ಕುಟುಂಬಗಳಿಗೆ ಪ್ರಯಾಣಕ್ಕೆ ಹತ್ತಿರದ ಹತ್ತಿರದ ರಸ್ತೆ ಇದು. ಗ್ರೀನ್ ವ್ಯೂ ಶಾಲೆ, ಶಾರದ ಟ್ಯೂಟೋರಿಯಲ್, ಗಾಂಧಿನಗರ ಶಾಲೆಗಳಿಗೆ ಹೋಗುವ ನೂರಾರು ವಿದ್ಯಾರ್ಥಿಗಳ ಒಡಾಟಕ್ಕೆ, ಕಲ್ಯಾಣ ಮಂಟಪ್ಪಕ್ಕೆ ಹೋಗಲು ಬರಲು ಹತ್ತಿರದ ದಾರಿ. ಇದೇ ರಸ್ತೆಯ ಮೂಲಕ 30ಕ್ಕೂ ಹೆಚ್ಚು ಮನೆಯವರು ಪ್ರಯಾಣ ಮಾಡುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಬಸ್ಸು ನಿಲ್ದಾಣದಿಂದ ಗಾಂಧಿನಗರ ತನಕ ಮುಖ್ಯ ರಸ್ತೆಗೆ ಪರ್ಯಾಯ ರಸ್ತೆಯೂ
ಹೌದು. ಆದ್ದರಿಂದ ಬಾಕಿ ಇರುವ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ನಾಗರಿಕರ ನಿಯೋಗ ಶಾದಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಪ್ರಮುಖರಾದ ಆನಂದ ಪೂಜಾರಿ, ಶೇಖರ ಚೋಡಿಪಣೆ, ಪರಮೇಶ್ವರ ಕುತ್ಯಾಳ, ಇಬ್ರಾಹಿಂ ಬಿಗ್ ಫೋರ್, ವೆಂಕಟ್ರಮಣ, ಪ್ರಕಾಶ್, ನೌಶಾದ್ ಕೆರೆಮೂಲೆ, ಸುಬ್ರಹ್ಮಣ್ಯ ಭಟ್, ಶಿವಾನಂದ, ಕೀರ್ತನ್ ಕಾಮತ್ ಮತ್ತಿತರರು ಶಾಸಕರಿಗೆ ಮನವಿ ಸಲ್ಲಿಸಿದರು.