ಸುಳ್ಯ:ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪುಕಲ್ಲು ಮತ್ತು ಮರಳು ಅಲಭ್ಯವಾಗಿದ್ದು ಪರಿಣಾಮವಾಗಿ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದನ್ನು ವಿರೋಧಿಸಿ ಜು. 14ರ ಸೋಮವಾರ ಜಿಲ್ಲೆಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಮತ್ತು ಸುಳ್ಯ 2 ತಾಲೂಕು ಕೇಂದ್ರಗಳಲ್ಲಿ
ಪೂರ್ವಾಹ್ನ 9:30ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ. ಕೆಂಪು ಕಲ್ಲು,ಮರಳು ಅಭಾವದಿಂದ ಕಟ್ಟಡ ನಿರ್ಮಾಣ ಕಾರ್ಮಿಕರು, ಲಾರಿ ಚಾಲಕಮಾಲಕರು, ಸ್ವಂತ ಸೂರು ಕಟ್ಟಿಕೊಳ್ಳಲು ಹೊರಟಿರುವ ಬಡ ಜನರು ತೀರ ಸಂಕಷ್ಟಕ್ಕೊಳಗಾಗಿದ್ದು ಮಳೆಗಾಲದ ಈ ದಿನಗಳಲ್ಲಿ ಜನರು ಬೀದಿಗೆ ಬೀಳುವಂತಾಗಿದೆ. ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಸರಿಯಾದ ಮರಳು ನೀತಿ ರೂಪಿಸದೆ, ಕೆಂಪು ಕಲ್ಲು ಗಣಿಗಾರಿಕೆಗೆ ಸೂಕ್ತ ನಿಯಮಗಳನ್ನು ರೂಪಿಸದೆ ಇರುವ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಾಗಿದೆ.
ಜಿಲ್ಲೆಯಲ್ಲಿ ಏಕಾಏಕಿ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿರುವ ಕಾರಣದಿಂದಾಗಿ ಮರಳಿನ ಬೆಲೆ ಗಗನಕ್ಕೇರಿದೆ ಕೆಂಪು ಕಲ್ಲಿನ ಬೆಲೆ ದ್ವಿಗುಣಗೊಂಡಿದೆ. ಬಡ ಜನರು ತಮ್ಮ ನಿರ್ಮಾಣ ಪೂರ್ಣಗೊಳಿಸಲಾಗದೆ ಬವಣೆ ಪಡುವಂತಾಗಿದೆ. ಗಣಿಗಾರಿಕೆಯನ್ನೇ ಅವಲಂಬಿಸಿರುವ ಲಾರಿಗಳ ಚಾಲಕರು ಉದ್ಯೋಗ ರಹಿತರಾಗಿದ್ದರೆ, ಮಾಲಕರು ವಾಹನಗಳ ಕಂತು ಕೊಟ್ಟದೆ ಒದ್ದಾಡುವಂತಾಗಿದೆ. ಕಟ್ಟಡ ನಿರ್ಮಾಣ ಕಾರ್ಯವನ್ನೇ ಅವಲಂಬಿಸಿರುವ ಸಾವಿರಾರು ಜನ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಅಲೆದಾಡುವಂತೆ ಆಗಿದೆ ಎಂದು ಅವರು ಹೇಳಿದ್ದಾರೆ.





