ಸುಳ್ಯ:ಸುಳ್ಯ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸುಳ್ಯ ತಾಲೂಕು ಕಚೇರಿಯಲ್ಲಿ ಶುಕ್ರವಾರ ಚಾಲನೆ ನೀಡಿದರು. ಭೂ ಸುರಕ್ಷಾ ಭೂ ದಾಖಲೆಗಳ ಇ-ಖಜಾನೆ ಕಛೇರಿಯನ್ನು ತಾಲೂಕು ಕಚೇರಿಯಲ್ಲಿ ತೆರೆಯಲಾಗಿದ್ದು. ಈ ಕಚೇರಿಯನ್ನು ಶಾಸಕರು ಉದ್ಘಾಟಿಸಿ ಮಾತನಾಡಿ ಭೂ ದಾಖಲೆಗಳನ್ನು
ಜನರಿಗೆ ಕೈಗೆ ಸಿಗುವಂತೆ ಸರಕಾರ ಉತ್ತಮ ಯೋಜನೆಯನ್ನು ಜಾರಿಗೊಳಿಸಿದೆ. ತಂತ್ರಜ್ಞಾನದ ಮೂಲಕ ಜನರ ಕೈಗೆ ಶಕ್ತಿ ನೀಡಿದಂತಾಗುತ್ತದೆ. ಜನರು ಬಂದು ಅಧಿಕಾರಿಗಳಿಗೆ ಕಾಯುವುದು, ಸಾಲುಗಟ್ಟಿ ನಿಲ್ಲುವುದು ತಪ್ಪುತ್ತದೆ. ಈ ಮೂಲಕ ಸರಳ, ತ್ವರಿತ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.
ತಹಸೀಲ್ದಾರ್ ಮಂಜುಳಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಂದಾಯ ಇಲಾಖೆಯಲ್ಲಿನ ದಾಖಲೆಗಳು ಶತಮಾನದಷ್ಟು ಹಳೆಯದು ಈ ಕಾರಣದಿಂದ ಈ ದಾಖಲೆಗಳನ್ನು ಸ್ಕಾö್ಯನ್ ಮಾಡಿ ಅವುಗಳನ್ನು ಭೂ ಸುರಕ್ಷ ಯೋಜನೆಗಳ ಮೂಲಕ ಅಪ್ಲೋಡ್ ಮಾಡಲಾಗುತ್ತದೆ. ಅವುಗಳನ್ನು ಸುಲಭವಾಗಿ ಜನರು ಪಡೆಯಬಹುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ,ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಉಪ ತಹಸೀಲ್ದಾರ್ ಮಂಜುನಾಥ, ಮುರುಳ್ಯ ಸಹಕಾರಿ ಸಂಘದ ಅಧ್ಯಕ್ಷೆ ಕುಮಾಮವತಿ ರೈ, ನಿರ್ದೇಶಕಿ ನಳಿನಿ ಎಸ್, ಅಧಿಕಾರಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು