ಬೆಂಗಳೂರು:ಆದಿತ್ಯ ಬಿರ್ಲಾ ಸಮೂಹ (ಎಬಿಜಿ) ನೇತೃತ್ವದ ಒಕ್ಕೂಟವು(ಕನ್ಸೋರ್ಷಿಯಂ) 16,706 ಕೋಟಿ ಮೊತ್ತಕ್ಕೆ ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಯನ್ನು ಖರೀದಿಸಿದೆ.
ವಿರಾಲ್ ಪಟೇಲ್ ಸಿಇಒ ಆಗಿರುವ
ಬ್ಲ್ಯಾಕ್ಸ್ಟೋನ್ ಇಕ್ವಿಟಿ ಫರ್ಮ್, ಅಮೆರಿಕದ ಹೂಡಿಕೆದಾರ ಡೇವಿಡ್ ಬ್ಲಿಟ್ಝರ್ ಒಡೆತನದ ಬೋಲ್ಟ್ ವೆಂಚರ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹವು ಈ ಒಕ್ಕೂಟದ ಇತರ ಪಾಲುದಾರರಾಗಿವೆ.
ಆರ್ಸಿಬಿಯ ಶೇ 100ರಷ್ಟು ಪಾಲನ್ನು ಖರೀದಿ ಮಾಡಲು ಒಕ್ಕೂಟವು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್ಎಲ್) ಜೊತೆ ಒಪ್ಪಂದ ಮಾಡಿಕೊಂಡಿತು. ಇದರಲ್ಲಿ ಪುರುಷರ ಮತ್ತು ಮಹಿಳಾ ತಂಡಗಳೂ ಸೇರಿಕೊಂಡಿವೆ ಎಂದು ಮೂಲಗಳು ತಿಳಿಸಿದೆ.
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಲಂಡನ್ ಮೂಲದ ಯುಕೆ–ಡಿಯಾಜಿಯೊದ ಅಂಗಸಂಸ್ಥೆಯಾಗಿದೆ. ತಮ್ಮ ವಹಿವಾಟು ಯೋಜನೆಯ ಕೇಂದ್ರಭಾಗವಾಗಿಲ್ಲದ ಕಾರಣ ಆರ್ಸಿಬಿ ಫ್ರಾಂಚೈಸಿಯಿಂದ ಹಿಂದೆಸರಿಯಲು ಯುಎಸ್ಎಲ್ ಉದ್ದೇಶಿಸಿತ್ತು.
ಮಾರಾಟ ಒಪ್ಪಂದದ ಪ್ರಕಾರ ಆದಿತ್ಯ ಬಿರ್ಲಾ ಸಮೂಹದ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್ಸಿಬಿಯ ನೂತನ ಚೇರ್ಮನ್ ಆಗಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಸತ್ಯನ್ ಗಜ್ವಾನಿ ಅವರು ಡೆಪ್ಯೂಟಿ ಚೇರ್ಮನ್ ಆಗಲಿದ್ದಾರೆ.ಆದರೆ ಬಿಸಿಸಿಐನಿಂದ, ಐಪಿಎಲ್ ಆಡಳಿತ ಮಂಡಳಿ ಮತ್ತು ಮಹಿಳಾ ವಿಭಾಗದ ಡಬ್ಲ್ಯುಪಿಎಲ್ ಮತ್ತು ಭಾರತ ಸ್ಪರ್ಧಾ ಆಯೋಗದಿಂದ ಈ ಒಪ್ಪಂದಕ್ಕೆ ಸ್ಥಿರೀಕರಣದಂಥ ಪ್ರಕ್ರಿಯೆ ಬಾಕಿ ಉಳಿದಿದೆ.
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯನ್ನು ಅಮೆರಿಕ ಮೂಲದ ಕಾಲ್ ಸೋಮಾನಿ ನೇತೃತ್ವದ ಒಕ್ಕೂಟವು ಸುಮಾರು 15,290 ಕೋಟಿಗೆ ಖರೀದಿಸಿದೆ. ಪ್ರಸ್ತುತ ಐಪಿಎಲ್ ಟೂರ್ನಿ ನಂತರ ಬಿಸಿಸಿಐ ಅನುಮೋದನೆ ನೀಡುವ ಸಾಧ್ಯತೆ ಇದೆ.














