ವಡೋದರ: ನದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ಬಳಿಕ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಫೈನಲ್ಗೆ ಲಗ್ಗೆ ಹಾಕಿತು.
ಸ್ಮೃತಿ ಮಂದಾನ ನಾಯಕತ್ವದ ಆರ್ಸಿಬಿ ತಂಡವು ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಂಟು ವಿಕೆಟ್ಗಳಿಂದ ಯು.ಪಿ ವಾರಿಯರ್ಸ್ ತಂಡವನ್ನು ಸುಲಭವಾಗಿ ಮಣಿಸಿತು. ಎರಡನೇ ಬಾರಿ
ಕಿರೀಟದ ನಿರೀಕ್ಷೆಯಲ್ಲಿರುವ 2024ರ ಚಾಂಪಿಯನ್ ಆರ್ಸಿಬಿ ತಂಡವು ಎಲಿಮಿನೇಟರ್ ಪಂದ್ಯದ ವಿಜೇತರನ್ನು ಫೆ.5ರಂದು ನಡೆಯುವ ಫೈನಲ್ನಲ್ಲಿ ಎದುರಿಸಲಿದೆ.ಈ ಸೋಲಿನೊಂದಿಗೆ ವಾರಿಯರ್ಸ್ ತಂಡದ ಪ್ಲೇ ಆಫ್ ಕನಸು ಕೂಡ ಭಗ್ನಗೊಂಡಿತು.
ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವಾರಿಯರ್ಸ್ ತಂಡಕ್ಕೆ ಕ್ಲರ್ಕ್ (22ಕ್ಕೆ 4) ಮತ್ತು ಹ್ಯಾರಿಸ್ (22ಕ್ಕೆ 2) ಕಡಿವಾಣ ಹಾಕಿದರು. ಮೆಗ್ ಲ್ಯಾನಿಂಗ್ (41; 30ಎ, 4X6, 6X1) ಮತ್ತು ದೀಪ್ತಿ ಶರ್ಮಾ (55; 43ಎ, 4X6, 6X1) ಅವರ ಆಟದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 143 ರನ್ಗಳ ಸಾಧಾರಣ ಮೊತ್ತ ಗಳಿಸಿತು.
ಗುರಿ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಹ್ಯಾರಿಸ್ (75;37ಎ, 4×13, 6×2) ಮತ್ತು ಮಂದಾನ (54;27ಎ, 4×8, 6×2) ಅವರು ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಬಿರುಸಿನ 108 (55ಎ) ರನ್ ಸೇರಿಸಿದರು. ಹ್ಯಾರಿಸ್ ಔಟಾದ ಬಳಿಕ ಜಾರ್ಜಿಯಾ ವಾಲ್ (16) ಅವರೊಂದಿಗೆ ಮಂದಾನ ತಂಡವನ್ನು ದಡ ಸೇರಿಸಿದರು. 41 ಎಸೆತಗಳು ಬಾಕಿ ಇರುವಂತೆ ಎರಡು ವಿಕೆಟ್ಗೆ 147 ರನ್ ಗಳಿಸಿ ಗೆಲುವಿನ ಹಳಿಗೆ ಮರಳಿತು. ಮಂದಾನ ಹಾಲಿ ಆವೃತ್ತಿಯಲ್ಲಿ ಎರಡನೇ ಮತ್ತು ಲೀಗ್ನಲ್ಲಿ ಆರನೇ ಅರ್ಧಶತಕ ದಾಖಲಿಸಿದರು.





