ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನ ಪ್ಲೇ ಆಫ್ಗೆ ಪ್ರವೇಶಿಸಿದೆ. 14 ಪಂದ್ಯಗಳಿಂದ 14 ಅಂಕ ಪಡೆದು ಪ್ಲೇ ಆಫ್ಗೆ ಪ್ರವೇಶಿಸಲು ಸಿಎಸ್ಕೆ ತಂಡವನ್ನು 18 ರನ್ ಅಂತರದಲ್ಲಿ ಸೋಲಿಸಬೇಕಾಗಿದ್ದ ಆರ್ಸಿಬಿ 27 ರನ್ ಅಂತರದಲ್ಲಿ ಮಣಿಸಿ ಪ್ಲೇ ಆಫ್ ಖಚಿತಪಡಿಸಿಕೊಂಡಿತು. ಮೊದಲ ಎಂಟು ಪಂದ್ಯಗಳಲ್ಲಿ ಕೇವಲ
ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಆರ್ಸಿಬಿ ಬಳಿಕ 6 ಪಂದ್ಯಗಳಲ್ಲಿ ನಿರಂತರ ಭರ್ಜರಿ ಗೆಲುವು ಸಾಧಿಸಿ ಫೀನಿಕ್ಸ್ನಂತೆ ಎದ್ದು ಬಂದು ಪ್ಲೇ ಆಫ್ ಎಂಟ್ರಿ ಕೊಟ್ಟಿತು.ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಸೊಲೊಪ್ಪಿಕೊಂಡಿತು. ಪ್ಲೇ-ಆಫ್ಗೆ ಪ್ರವೇಶಿಸಲು ಈ ಪಂದ್ಯ ಗೆಲ್ಲುವುದರೊಂದಿಗೆ ಸಿಎಸ್ಕೆ ತಂಡವನ್ನು 200 ರನ್ಗಳಿಗೆ ನಿಯಂತ್ರಿಸುವ ಗುರಿಯೊಂದಿಗೆ ಬೌಲಿಂಗ್ ಆರಂಭಿಸಿದ ಆರ್ಸಿಬಿ ಮೊದಲ ಓವರ್ನಲ್ಲಿಯೇ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ವಿಕೆಟ್ ಪಡೆದು ಸಂಭ್ರಮಿಸಿದರು. ಸೊನ್ನೆ ರನ್ ಗಳಿಸಿದ ಗಾಯಕ್ವಾಡ್ ಹಾಗೂ 4 ರನ್ ಗಳಿಸಿದ ಡ್ಯಾರೆಲ್ ಮಿಚ್ಚಲ್ ಬೇಗನೇ ಮರಳಿದರೂ ರಚಿನ್ ರವೀಂದ್ರ ಹಾಗೂ ಅಜಿಂಕ್ಯಾ ರಹಾನೆ ತಂಡಕ್ಕೆ ಚೇತರಿಕೆ ನೀಡಿದರು. ರವೀಂದ್ರ 36 ಎಸೆತಗಳಲ್ಲಿ 60 ರನ್ ಬಾರಿಸಿದರೆ,ರಹಾನೆ 22 ಎಸೆತಗಳಲ್ಲಿ 33 ರನ್ ಗಳಿಸಿದರು. 7 ರನ್ ಗಳಿಸಿ ಶಿವಂ ದುಬೆ ಮರಳಿದರು. ಸ್ಯಾಂಟ್ನರ್ ಪಾಫ್ ಡುಪ್ಲೆಸಿ ಒಂದೇ ಕೈಯಲ್ಲಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಬಳಿಕ ರವೀಂದ್ರ ಜಡೇಜ ಮತ್ತು ಎಂ.ಎಸ್.ಧೋನಿ ಭರ್ಜರಿ ಹೋರಾಟ ನಡೆಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದರು. 22 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿದ ಜಡೇಜ ಹಾಗೂ 13 ಎಸೆತಗಳಲ್ಲಿ 25 ರನ್ ಬಾರಿಸಿದ ಧೋನಿ ಏಳನೇ ವಿಕೆಟ್ಗೆ 61 ರನ್ ಗಳಿಸಿದರು. ಪ್ಲೇ ಆಫ್ಗೆ ಪ್ರವೇಶಿಸಲು 201 ರನ್ ಗುರಿ ಮುಟ್ಟಲು ಕೊನೆಯ ಓವರ್ನಲ್ಲಿ 17 ರನ್ ಅಗತ್ಯ ಇತ್ತು. ಮೊದಲ ಎಸೆತ ಸಿಕ್ಸರ್ ಸಿಡಿಸಿ ಧೋನಿ ಭರ್ಜರಿ ಆರಂಭ ನೀಡಿದರೂ, ಮುಂದಿನ ಎಸೆತದಲ್ಲಿ ಧೋನಿ ಔಟ್ ಆದ ಕಾರಣ ಚೆನ್ನೈ ಕನಸು ಕಮರಿತು.
ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿಗೆ ನಾಯಕ ಡುಪ್ಲೆಸಿ ಹಾಗೂ ಕೊಹ್ಲಿ ಆಸರೆಯಾದರು. ಇವರಿಬ್ಬರು ಮೊದಲ ವಿಕೆಟ್ಗೆ 9.4 ಓವರ್ಗಳಲ್ಲಿ 78 ರನ್ಗಳ ಜೊತೆಯಾಟ ಕಟ್ಟಿದರು.ಈ ನಡುವೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಸಿಎಸ್ಕೆ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ 700 ರನ್ಗಳ ಸಾಧನೆ ಮಾಡಿದರು. ಕೊಹ್ಲಿ 29 ಎಸೆತಗಳಲ್ಲಿ 47 ರನ್ ಗಳಿಸಿ (3 ಬೌಂಡರಿ, 4 ಸಿಕ್ಸರ್) ಔಟ್ ಆದರು.
ಮತ್ತೊಂದೆಡೆ ನಾಯಕನ ಆಟವಾಡಿದ ಡುಪ್ಲೆಸಿ 35 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದರು. ಆದರೆ ವಿವಾದಾತ್ಮಕ ರನೌಟ್ ತೀರ್ಪಿಗೆ ಔಟ್ ಆದರು. ಡುಪ್ಲೆಸಿ 39 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು.
ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಜತ್ ಪಾಟೀದಾರ್ (41) ಹಾಗೂ ಕ್ಯಾಮರಾನ್ ಗ್ರೀನ್, ಆರ್ಸಿಬಿಗೆ ಬೃಹತ್ ಮೊತ್ತ ಪೇರಿಸಲು ನೆರವಾದರು. ಪಾಟೀದಾರ್ 23 ಎಸೆತಗಳಲ್ಲಿ 41 ರನ್ (4 ಸಿಕ್ಸರ್, 2 ಬೌಂಡರಿ) ಗಳಿಸಿದರು.
ಗ್ರೀನ್ 17 ಎಸೆತಗಳಲ್ಲಿ 38 ರನ್ ಗಳಿಸಿ (3 ಬೌಂಡರಿ, 3 ಸಿಕ್ಸರ್) ಔಟಾಗದೆ ಉಳಿದರು. ದಿನೇಶ್ ಕಾರ್ತಿಕ್ (14) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (16) ಸಹ ಉಪಯುಕ್ತ ಕಾಣಿಕೆ ನೀಡಿದರು.
ಈ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕವಾಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪ್ಲೇ-ಆಫ್ಗೆ ಪ್ರವೇಶಿಸಲು ಇತ್ತಂಡಗಳಿಗೂ ಈ ಪಂದ್ಯ ‘ಮಾಡು ಇಲ್ಲವೇ ಮಡಿ’ ಆಗಿತ್ತು.