ನವದೆಹಲಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್ ರೌಂಡರ್ ಕ್ರುನಾಲ್ ಪಾಂಡ್ಯ ಅವರ ಜವಾಬ್ದಾರಿಯುತ ಅರ್ಧ ಶತಕದ ನೆರವಿನಿಂದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ರಥಮ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಡೆಲ್ಲಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ.10 ಪಂದ್ಯಗಳನ್ನು ಆಡಿರುವ ಆರ್ಸಿಬಿ 7 ಜಯದೊಂದಿಗೆ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.ಟಾಸ್ ಸೋತು
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರ್ಸಿಬಿ ಆರಂಭ ಉತ್ತಮವಾಗಿರಲಿಲ್ಲಿ 26 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳಿದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಕೊಹ್ಲಿ ಹಾಗೂ ಪಾಂಡ್ಯ 4ನೇ ವಿಕೆಟ್ಗೆ 119 ರನ್ ಜೊತೆಯಾಟ ನೀಡಿ ಗೆಲುವಿಗೆ
ಭದ್ರ ಅಡಿಪಾಯ ಹಾಕಿದರು. ಕ್ರುನಾಲ್ ಪಾಂಡ್ಯ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 73 ರನ್ ಗಳಿಸಿದರು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 51 ರನ್ ಗಳಿಸಿದರೆ, ಕೊನೆಯಲ್ಲಿ ಟಿಮ್ ಡೇವಿಡ್ ಕೇವಲ 5 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 19 ರನ್ ಚಚ್ಚಿ ಗೆಲುವನ್ನು ಸುಲಭಗೊಳಿಸಿದರು. ಆರ್ಸಿಬಿಯ ಜೆ.ಬೋಥೆಲ್ (12), ದೇವದತ್ ಪಡಿಕ್ಕಲ್(0), ರಜತ್ ಪಾಟಿದಾರ್(6) ಬೇಗನೇ ಮರಳಿದರು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಅಭಿಷೇಕ್ ಪೊರೇಲ್ 28 ಮತ್ತು ಫಫ್ ಡುಪ್ಲೆಸಿ 22 ರನ್ ಸಿಡಿಸಿದರು. ಕರುಣ್ ನಾಯರ್ 4 ರನ್ಗೆ ಪೆವಿಲಿಯನ್ ಸೇರಿಕೊಂಡರು. ಉತ್ತಮವಾಗಿ ಆಡಿದ ಕೆ.ಎಲ್. ರಾಹುಲ್ 41 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಆರ್ಸಿಬಿ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ಎದುರು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಡೆಲ್ಲಿ ತೀವ್ರ ಕುಸಿತ ಅನುಭವಿಸಿತು. ಅಂತ್ಯದಲ್ಲಿ ಅಬ್ಬರಿಸಿದ ಕ್ರಿಸ್ಟನ್ ಸ್ಟಬ್ಸ್ 18 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಡೆಲ್ಲಿ 163 ರನ್ಗಳ ಗುರಿ ನೀಡಲು ನೆರವಾದರು.
ಆರ್ಸಿಬಿ ಪರ ಭುವನೇಶ್ವರ್ ಕುಮಾರ್ 33 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಹ್ಯಾಜಲ್ವುಡ್ 36 ರನ್ ನೀಡಿ 2 ವಿಕೆಟ್ ಪಡೆದರು.









