ಸುಳ್ಯ:ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪೂಜೆ ನೆರವೇರಿ ಚಿತ್ರೀಕರಣ ಆರಂಭಗೊಂಡು ಸುಳ್ಯ ಹಾಗೂ ಪರಿಸರದಲ್ಲಿ ಚಿತ್ರಿಕರಣ ಪೂರ್ತಿಯಾದ ಸಂತೋಷ್ ಕೊಡೆಂಕೇರಿ ನಿರ್ದೇಶನದ ನೂತನ ಸಿನಿಮಾ ‘ರವಿಕೆ ಪ್ರಸಂಗ’ ಸದ್ಯದಲ್ಲಿಯೇ ತೆರೆಗೆ ಬರಲಿದೆ ಎಂದು ಸಿನಿಮಾದ ನಿರ್ದೇಶಕ ಸಂತೋಷ್ ಕೊಡೆಂಕೇರಿ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿನಿಮಾದ ಟ್ರೈಲರ್ ಹಾಗೂ
ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತಿದೆ. ಟ್ರೈಲರ್ ಹಾಗೂ ಟೈಟಲ್ ಸಾಂಗ್ ತೀವ್ರ ಕುತೂಹಲ ಕೆರಳಿಸಿದ್ದು ಟ್ರೆಂಡಿಂಗ್ ಆಗುತಿದೆ ಎಂದು ಹೇಳಿದರು. ಚಿತ್ರದ ಹಾಡುಗಳು ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಚಿತ್ರ ಸದ್ಯದಲ್ಲಿಯೇ ರಿಲೀಸ್ ಆಗಲಿದೆ ಎಂದು ಹೇಳಿದರು. ರವಿಕೆ ಪ್ರಸಂಗ ಹಾಸ್ಯ ಹಾಗೂ ಭಾವನಾತ್ಮಕ ಹಿನ್ನಲೆಯಲ್ಲಿ ಸುಳ್ಯದ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡ ಈ
ಸಿನಿಮಾ ಎಲ್ಲರೂ ಕುಟುಂಬ ಸಮೇತರಾಗಿ ನೋಡಬಹುದಾದ ಮನೋರಂಜನಾತ್ಮಕ ಸಿನಿಮಾ. ಸುಂದರ ಕಥಾ ಹಂದರ ಹೊಂದಿರುವ ಮನರಂಜನಾತ್ಮಕ ಚಿತ್ರವಾಗಿರುವ ರವಿಕೆ ಪ್ರಸಂಗ ನಮ್ಮ ಒಂದು ವಿಭಿನ್ನ ಪ್ರಯೋಗ ಎಂದು ಅವರು ವಿವರಿಸಿದರು.
ಚಿತ್ರದ ಕಥೆ ಹಾಗೂ ಸಂಭಾಷಣೆ ರಚಿಸಿರುವ ಪಾವನಾ ಸಂತೋಷ್ ಮಾತನಾಡಿ ‘ರವಿಕೆ ಪ್ರಸಂಗ’ ಒಂದು ಸುಂದರ ಕೌಟುಂಬಿಕ ಚಿತ್ರ. ಒಂದು ರವಿಕೆಯನ್ನು ಎಳೆಯಾಗಿ ತೆಗೆದುಕೊಂಡು ಸಾಮಾಜಿಕ ಸಂದೇಶ ನೀಡುವ ಕೌಟುಂಬಿಕ ಚಿತ್ರ. ಹಾಸ್ಯ, ಸೆಂಟಿಮೆಂಟಲ್, ಇಮೋಷನಲ್ ಆಗಿ ಸಾಗುವ ಚಿತ್ರ. ಇದು ಪ್ರತಿ ಹೆಣ್ಣು ಮಕ್ಕಳ ಬದುಕಿನಲ್ಲಿ ಸಂಭವಿಸಬಹುದಾದ ಕಥೆ ಎಂದು ಹೇಳಿದರು.
ದೃಷ್ಠಿ ಮೀಡಿಯಾ ನಿರ್ಮಾಣದ
ರವಿಕೆ ಪ್ರಸಂಗ ಸಿನಿಮಾದ ಕಥೆ ಮತ್ತು ಸಂಭಾಷಣೆಯನ್ನು ಪಾವನಾ ಸಂತೋಷ್ ರಚಿಸಿದ್ದು ಸಂತೋಷ್ ಕೊಡೆಂಕೇರಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಗೀತಾ ಭಾರತಿ, ಪದ್ಮಜಾ ರಾವ್, ಸುಮನ್ ರಂಗನಾಥ್, ಪ್ರವೀಣ್ ಅಥರ್ವ, ರಾಕೇಶ್ ಮಯ್ಯಾ, ಕೃಷ್ಣಮೂರ್ತಿ ಕವತಾರ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ ಇದೆ. ಜೊತೆಗೆ ಸುಳ್ಯದ ಸ್ಥಳೀಯ ಕಲಾವಿದರು ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸಂತೋಷ್ ಕೊಡೆಂಕೇರಿ ಮತ್ತು ಪಾವನಾ ಸಂತೋಷ್ ತಿಳಿಸಿದ್ದಾರೆ.
ಸಿನಿಮಾದ ಟ್ರೈಲರ್, ಟೈಟಲ್ ಸಾಂಗ್ ಹಾಗೂ ಸಿನಿಮಾದ ಹಾಡಿನ ತುಣುಕುಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಲ್ಲೋರ್ವರಾದ ಶಿವರುದ್ರಯ್ಯ ಎಸ್.ವಿ, ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕೇರಿ ಉಪಸ್ಥಿತರಿದ್ದರು.