ಹುಬ್ಬಳ್ಳಿ:ಹೊಸ ಪಡಿತರ ಚೀಟಿ ಕೋರಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ, ಶೀಘ್ರದಲ್ಲಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವ ಬಹುತೇಕ
ಬಿಪಿಎಲ್ ಕಾರ್ಡ್ ಕೋರಿದ್ದಾರೆ. ಇವರನ್ನು ಪರಿಶೀಲಿಸಿ, ದಾಖಲಾತಿಗಳ ಆಧಾರದ ಮೇಲೆ ಬಿಪಿಎಲ್, ಎಪಿಎಲ್ ಬೇರ್ಪಡಿಸಿ, ಕಾರ್ಡ್ ವಿತರಿಸಲಾಗುವುದು’ ಎಂದರು.‘ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂತಹವರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇವು ಪತ್ತೆಯಾದರೆ ಅವುಗಳನ್ನು ರದ್ದುಪಡಿಸಲಾಗುವುದು. ಇದರ ಜೊತೆಗೆ, ಪಡಿತರ ಅಕ್ಕಿ ದುರುಪಯೋಗವಾದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ. ಇಂತಹ ದೂರುಗಳು ಬಂದ ಕಡೆ ತನಿಖೆ ಮಾಡಿಸುತ್ತೇವೆ’ ಎಂದು ಹೇಳಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ನಾವು 10 ಕೆ.ಜಿ. ಅಕ್ಕಿ ಕೊಡಲು ಹೆಚ್ಚುವರಿ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದರೆ ಅವರು ಕೊಡಲಿಲ್ಲ. ಹೀಗಾಗಿ ಅಕ್ಕಿ ಬೆಳೆಯುವ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ ರಾಜ್ಯಗಳಿಂದ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಅಕ್ಕಿ ಸಿಕ್ಕ ತಕ್ಷಣ ಹಣ ಕೊಡುವುದನ್ನು ನಿಲ್ಲಿಸಿ, ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.









