ಪಟ್ನಾ: ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮಧ್ಯಮವೇಗಿ ವೈಶಾಖ ವಿಜಯಕುಮಾರ್ ಮತ್ತು ಅನುಭವಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್ನಿಂದಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ಸಿ ಗುಂಪಿನ ಮೊದಲೆರಡೂ ಪಂದ್ಯಗಳು ಮಳೆಗೆ ಕೊಚ್ಚಿಹೋಗಿದ್ದವು. ಆದರೆ ಮೂರನೇ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು
8 ವಿಕೆಟ್ಗಳಿಂದ ಬಿಹಾರ ವಿರುದ್ಧ ಜಯಿಸಿತು. 6 ಅಂಕಗಳನ್ನು ತನ್ನದಾಗಿಸಿಕೊಂಡಿತು. ವೈಶಾಖ (44ಕ್ಕೆ3) ಮತ್ತು ಶ್ರೆಯಸ್ (70ಕ್ಕೆ4) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬಿಹಾರ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಬಹಳಷ್ಟು ಪ್ರಯತ್ನಿಸಿತು. ತಂಡದ ಬಲಗೈ ಬ್ಯಾಟರ್ ಶಕೀಬುಲ್ ಗಣಿ (130; 194ಎ, 4X15, 6X4) ಶತಕ ದಾಖಲಿಸಿದರು. ಆದರೂ ಕರ್ನಾಟಕ ತಂಡದ ಬೌಲರ್ಗಳು ಬಿಹಾರ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ 212 ರನ್ಗಳಿಗೆ ಕಟ್ಟಿಹಾಕಿತು. ಅದರಿಂದಾಗಿ ಲಭಿಸಿದ 69 ರನ್ಗಳ ಗುರಿಯನ್ನು 10.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು. ಆರಂಭಿಕ ಬ್ಯಾಟರ್ ನಿಕಿನ್ ಜೋಸ್ (ಔಟಾಗದೆ 28) ಮತ್ತು
ಅಭಿನವ್ ಮನೋಹರ್ (ಔಟಾಗದೆ 17) ತಂಡವನ್ನು ಗೆಲುವಿನ ದಡ ಸೇರಿಸಿದರು.ಬಿಹಾರ ತಂಡವು ಮೊದಲ ಇನಿಂಗ್ಸ್ನಲ್ಲಿ 143 ರನ್ ಗಳಿಸಿತ್ತು. ಆದರೆ ಎರಡನೇ ದಿನದಾಟವು ಮಳೆಯಿಂದಾಗಿ ನಡೆದಿರಲಿಲ್ಲ. ಮೂರನೇ ದಿನ ಮತ್ತು ನಾಲ್ಕನೇ ದಿನದ ಬೆಳಿಗ್ಗೆ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ ಮಯಂಕ್ ಅಗರವಾಲ್ ಶತಕ ಮತ್ತು ಮನೀಷ್ ಪಾಂಡೆ ಅರ್ಧಶತಕದ ಬಲದಿಂದ 51 ಓವರ್ಗಳಲ್ಲಿ 7 ವಿಕೆಟ್ಗಳಿಗೆ 287 ರನ್ ಗಳಿಸಿತು. 144 ರನ್ಗಳ ಮುನ್ನಡೆ ಸಾಧಿಸಿತು.
ಗಣಿ ಮತ್ತು ಬಾಬುಲ್ ಕುಮಾರ್ (44; 111ಎ) 3ನೇ ವಿಕೆಟ್ ಜೊತೆಯಾಟದಲ್ಲಿ 130 ರನ್ ಸೇರಿಸಿದರು. ಇದರಿಂದಾಗಿ ಕರ್ನಾಟಕಕ್ಕೆ ಇನಿಂಗ್ಸ್ ಜಯಸಾಧಿಸುವ ಗುರಿ ಕೈತಪ್ಪಿತು.