ಹೊಸದಿಲ್ಲಿ: ರಾಜ್ಯಸಭೆಗೆ ನಡೆದ ಉಪಚುನಾವಣೆಯಲ್ಲಿ ಒಂಭತ್ತು ಬಿಜೆಪಿ ಮತ್ತು ಮಿತ್ರಪಕ್ಷಗಳ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದಿಂದ ಕೇಂದ್ರ ಸಚಿವ ಜಾರ್ಜ್ ಕುರಿಯನ್,ಅಸ್ಸಾಮಿನಿಂದ ಮಿಶನ್ ರಂಜನ ದಾಸ್ ಮತ್ತು ರಾಮೇಶ್ವರ ತೇಲಿ,ಬಿಹಾರದಿಂದ ಮನನ್ ಕುಮಾರ ಮಿಶ್ರಾ,ಹರ್ಯಾಣದಿಂದ
ಕಿರಣ ಚೌಧರಿ,ಮಹಾರಾಷ್ಟ್ರದಿಂದ ಧೈರ್ಯಶೀಲ ಪಾಟೀಲ್, ಒಡಿಶಾದಿಂದ ಮಮತಾ ಮೊಹಂತಾ,ರಾಜಸ್ಥಾನದಿಂದ ರವನೀತ ಸಿಂಗ್ ಬಿಟ್ಟು ಮತ್ತು ತ್ರಿಪುರಾದಿಂದ ರಾಜೀವ ಭಟ್ಟಾಚಾರ್ಜಿ ಅವರು ರಾಜ್ಯಸಭೆಗೆ ಆಯ್ಕೆಯಾದ ಬಿಜೆಪಿ ಸದಸ್ಯರಾಗಿದ್ದಾರೆ.
ಎನ್ಡಿಎ ಮಿತ್ರಪಕ್ಷಗಳ ಪೈಕಿ ಎನ್ಸಿಪಿ(ಅಜಿತ ಪವಾರ್ ಬಣ)ಯ ನಿತಿನ್ ಪಾಟೀಲ್ ಮತ್ತು ಆರ್ಎಲ್ಎಂ ಅಧ್ಯಕ್ಷ ಉಪೇಂದ್ರ ಕುಶ್ವಾಹ್ ಅವರು ಬಿಹಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ ಮನು ಸಿಂಘ್ವಿ ಅವರೂ ತೆಲಂಗಾಣದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
245 ಸದಸ್ಯಬಲದ ರಾಜ್ಯಸಭೆಯಲ್ಲಿ ಈಗ ಬಿಜೆಪಿ ಸದಸ್ಯರ ಸಂಖ್ಯೆ 96ಕ್ಕೆ ಮತ್ತು ಎನ್ಡಿಬಲ 121ಕ್ಕೇರಿದೆ.ಸದನದಲ್ಲಿ ಇಂಡಿಯಾ ಮೈತ್ರಿಕೂಟದ ಬಲ 85ಕ್ಕೇರಿದೆ.ಪ್ರಸ್ತುತ ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರದ ನಾಲ್ಕು ಸ್ಥಾನಗಳು ಮತ್ತು ನಾಮ ನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳು ಖಾಲಿಯಿರುವುದರಿಂದ ರಾಜ್ಯಸಭೆಯ ಹಾಲಿ ಸಂಖ್ಯಾ ಬಲ 237 ಆಗಿದೆ. ಆದುದರಿಂದ ಸದನದಲ್ಲಿ ಬಹುಮತಕ್ಕೆ 119 ಸದಸ್ಯರ ಅಗತ್ಯವಿದೆ. ಇದೀಗ ಬಿಜೆಪಿ ನೇತೃತ್ವದ ಎನ್ಡಿಎ ಸದಸ್ಯ ಬಲ 121ಕ್ಕೆ ಏರಿ ಸರಳ ಬಹುಮತ ಪಡೆದಿದೆ