ಸುಳ್ಯ: ಸುಳ್ಯ ರೈತ ಉತ್ಪಾದಕ ಕಂಪೆನಿ ವತಿಯಿಂದ ಕೃಷಿ ಸಖೀ, ಕೃಷಿ ಉದ್ಯೋಗ ಸಖೀ ಮತ್ತು ಪಶು ಸಖೀಯರಿಗೆ “ಕೃಷಿ ಪೂರಕ ಮಾಹಿತಿ” ಕಾರ್ಯಕ್ರಮ ಎ.ಪಿ.ಎಂ.ಸಿ ಸಭಾಭವನದಲ್ಲಿ ನಡೆಯಿತು. ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ದೀಪಬೆಳಗಿಸಿ ಉದ್ಘಾಟಿಸಿ ಕೃಷಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿ ತೋಟಗಾರಿಕೆ ಇಲಾಖೆಯ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಸುಹಾನ ಅವರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಸಂಜೀವಿನಿ ವಿಭಾಗದ ಮುಖ್ಯಸ್ಥೆ ಶ್ವೇತಾ ಎನ್.ಆರ್ ಎಲ್.ಎಂ ಯೋಜನೆಯ ಕುರಿತು ಮಾಹಿತಿ ನೀಡಿದರ. ಸಂಪನ್ಮೂಲ ವ್ಯಕ್ತಿಯಾದ ಗಣೇಶ್ ಪ್ರಾದೇಶಿಕ ವ್ಯವಸ್ಥಾಪಕರು ಸಮುನ್ನತಿ ಆಗ್ರೋ ಫೈನಾನ್ಸ್ ಲೀ. ಅವರು ಸಾವಯವ ಗೊಬ್ಬರದ ಬಳಕೆ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್ ವಹಿಸಿದ್ದು ಎಫ್. ಪಿ. ಓ ದ ಕುರಿತು ಸಮಗ್ರವಾಗಿ
ಮಾಹಿತಿ ನೀಡಿದರು ಮತ್ತು ಕಂಪೆನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಕುರಿತು ತಿಳಿಸಿದರು. ಸುಮಾರು ಅರುವತ್ತು ಜನ ಕೃಷಿ ಸಖೀ, ಕೃಷಿ ಉದ್ಯೋಗ ಸಖೀ ಮತ್ತು ಪಶು ಸಖೀಯರು ಭಾಗವಹಿಸಿದರು ಮತ್ತು ಕಂಪೆನಿಯ ನಿರ್ದೇಶಕರುಗಳು, ಕೃಷಿ ಇಲಾಖೆಯ ಸಿಬ್ಬಂದಿಗಳು ಮತ್ತು ತಾಲೂಕು ಪಂಚಾಯತಿಯ ಎನ್ ಆರ್ ಎಲ್ ಎಂ ನ ವಲಯ ಮೇಲ್ವಿಚಾರಕರಾದ ಮಹೇಶ್ ಬಿ ಉಪಸ್ಥಿತರಿದ್ದರು. ಸುಳ್ಯ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಹರೀಶ್ ಕೆ ಧನ್ಯವಾದಗಳು ನೀಡಿದರು.









