ಸುಳ್ಯ:ಕತ್ತಲು ಕವಿದು ನಿರಂತರ ಸುರಿಯುವ ಮಳೆ,ಹೊಗೆ ತುಂಬಿ ಜಡಿ ಜಡಿ ಮಳೆಯ ವಾತಾವರಣ. ಜುಲೈ-ಆಗಸ್ಟ್ ತಿಂಗಳಂತೆ ಭಾಸವಾಗುತ್ತಿದ್ದು ಡಿಸೆಂಬರ್ ತಿಂಗಳಲ್ಲಿ ಮಳೆಗಾಲದ ವಾತಾವರಣ ಸೃಷ್ಠಿಯಾಗಿದೆ. ಸುಳ್ಯ ತಾಲೂಕಿನಲ್ಲಿ ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದು ಮಳೆ ಸುರಿಯುತಿದೆ. 10 ಗಂಟೆಯ ಬಳಿಕ ಮಳೆ ಆರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ
ಮಳೆ ಇನ್ನಷ್ಟು ಬಿರುಸುಗೊಂಡಿದೆ. ಡಿಸೆಂಬರ್ ತಿಂಗಳು ಜುಲೈ ತಿಂಗಳ ಮಳೆಗಾಲದಂತೆ ಭಾಸವಾಗುತ್ತಿದೆ.
ಫೆಂಗಲ್ ಚಂಡಮಾರುತದ ಪರಿಣಾಮದಿಂದ ಈಗ ಅಕಾಲಿಕ ಮಳೆ ಸುರಿಯುತಿದೆ. ಫೆಂಗಲ್ ಚಂಡಮಾರುತ ತಮಿಳುನಾಡು ತೀರಕ್ಕೆ ಅಪ್ಪಳಿಸಿದ್ದು ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದೆ.
ಅಕಾಲಿಕ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗಿದೆ. ಕೃಷಿಕರಿಗೆ ಆತಂಕ ಸೃಷ್ಠಿಯಾಗಿದೆ. ಅಡಿಕೆ ಒಣಗಿಸಲು ಸಮಸ್ಯೆ ಉಂಟಾಗಿದೆ. ಅಲ್ಲದೆ ಅಡಿಕೆ ನಳ್ಳಿ ಉದುರುವ ಸಮಸ್ಯೆ ಹೆಚ್ಚುವ ಆತಂಕ ಎದುರಾಗಿದೆ.
ಅಕಾಲಿಕ ಮಳೆಯಿಂದ ಎಲ್ಲಾ ಕೃಷಿಗೆ ತೊಂದರೆ ಆಗುವ ಆತಂಕ ಇದೆ. ಮಾವು, ಹಲಸು ಸೇರಿದಂತೆ ಎಲ್ಲಾ ಫಸಲು ಹೂ ಬಿಡುವ ಸಮಯ ಆದ ಕಾರಣ ಈ ವಾತಾವರಣ ಹಿನ್ನಡೆಯಾಗಿದೆ. ಒಣಗಿಸಲು ಹಾಕಿದ ಅಡಿಕೆ ಮಳೆಯಲ್ಲಿ ತೋಯ್ದು ಹೋಗಿದೆ. ಅಡಿಕೆ ಒದ್ದೆಯಾದರೆ ಗುಣಮಟ್ಟ ಕಡಿಮೆಯಾಗುವ ಅಪಾಯ ಇದೆ.