ಸುಳ್ಯ:ಏರಿದ ಉಷ್ಣಾಂಶದಿಂದ ಬಳಲಿ ಬೆಂಡಾಗಿದ್ದ ಭುವಿಗೆ ತಂಪೆರೆದು ಮಳೆಯ ಸಿಂಚನ. ಭಾರೀ ಸೆಕೆಯಿಂದ ಬಸವಳಿದಿದ್ದ ಜನಕ್ಕೆ ಖುಷಿ ನೀಡಿ ಸುಳ್ಯದಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಶನಿವಾರ ಸಂಜೆಯ ವೇಳೆಗೆ ಉತ್ತಮ ಮಳೆ ಸುರಿದಿದೆ. ಸುಮಾರು
ಅರ್ಧ ಗಂಟೆಗೂ ಹೆಚ್ಚು ಸಮಯದಿಂದ ಗುಡುಗು, ಸಿಡಿಲು, ಗಾಳಿಯ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ.
ಕಳೆದ ಕೆಲವು ದಿನಗಳಿಂದ 39 ಡಿಗ್ರಿ ಸೆಲ್ಸಿಯಸ್ ತನಕ ಏರಿದ್ದ ಭಾರೀ ಸೆಕೆಯಿಂದ ಜನರು ಬಳಲಿದ್ದರು. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಶನಿವಾರ ಮಳೆಯಾಗಲಿದೆ.ಇದಲ್ಲದೆ ಕರಾವಳಿಯ ಮೂರು ಜಿಲ್ಲೆಗಳ ಕೆಲವೆಡೆ ಕೆಲವು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ರಾಜ್ಯದ ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಕೆಲವು ಭಾಗಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.










