ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶನಿವಾರ ಮಳೆಯಾಗಿದೆ.ಮುಂದಿನ ಕೆಲವು ದಿನ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೀದರ್, ಯಾದಗಿರಿ, ಚಿಕ್ಕಮಗಳೂರು, ಮೈಸೂರು ಮತ್ತು ಹಾಸನ ಜಿಲ್ಲೆಗಳ
ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕತ್ತರಗುಪ್ಪೆ, ಮಹಮದ್ಪುರಗಳಲ್ಲಿ ಆಲಿಕಲ್ಲು ಮಳೆ ಸುರಿಯಿತು. ಶಿಡ್ಲಘಟ್ಟ, ಗೌರಿಬಿದನೂರು, ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧೆಡೆ ತುಂತುರು ಮಳೆ ಆಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ, ಶ್ರೀರಂಗಪುರ ಮತ್ತಿತರ ಕಡೆ ಹತ್ತು ನಿಮಿಷ ಎಡೆಬಿಡದೆ ಮಳೆ ಸುರಿಯಿತು.
ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಮಿಂಚು–ಗುಡುಗು ಸಮೇತ ಮುಂಗಾರು ಪೂರ್ವ ಮಳೆ ಹದವಾಗಿ ಸುರಿಯಿತು. ಹೊಸಕೋಟೆಯಲ್ಲೂ ತುಂತುರು ಮಳೆ ಸುರಿಯಿತು.ಬೀದರ್, ಹುಮನಾಬಾದ್ನಲ್ಲಿ ಶನಿವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಬೀದರ್ ತಾಲ್ಲೂಕಿನ ಜನವಾಡ, ಮರಕಲ್, ಚಿಕ್ಕಪೇಟೆ, ಇಸ್ಲಾಂಪುರ, ಬೆನಕನಳ್ಳಿ, ಮಾಮನಕೇರಿ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಜೆ ವೇಳೆ ಆಲಿಕಲ್ಲು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತ ಉತ್ತಮ ಮಳೆಯಾಗಿದ್ದು,
ಹಾಸನ ಜಿಲ್ಲೆಯ ಬೇಲೂರು ಹಾಗೂ ಸುತ್ತಮುತ್ತ ಶನಿವಾರ ಅರ್ಧ ಗಂಟೆ ಆಲಿಕಲ್ಲು ಮಳೆ ಸುರಿಯಿತು. ಹೊಳೆನರಸೀಪುರದಲ್ಲಿ ಸಾಧಾರಣ ಮಳೆಯಾಗಿದೆ.ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ
ಮಳೆಯಾಗಿದೆ. ಮಂಡ್ಯ ನಗರ, ಕೆ.ಆರ್.ಪೇಟೆ, ಕೊಡಗಿನ ಕುಶಾಲನಗರದಲ್ಲಿ ಮಳೆಯಾಗಿದೆ ಎಂದು ವರದಿಯಾಗಿದೆ.