ಬೆಂಗಳೂರು: ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಕೆಲವೆಡೆ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 30ರಿಂದ 40 ಕಿ.ಮೀ. ವೇಗದಲ್ಲಿ
ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಕೆಲವೆಡೆ ಮಂಗಳವಾರ ಸಂಜೆ ತುಂತುರು ಮಳೆ ಸುರಿದಿದೆ.ಬುಧವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಈ ಮಧ್ಯೆ ಕರಾವಳಿಯಲ್ಲಿ ತಾಪಮಾನ ಹೆಚ್ಚಳವಾಗಿದ್ದು, ದಕ್ಷಿಣ ಕನ್ನಡದ ಸುಳ್ಯದಲ್ಲಿ ಗರಿಷ್ಠ ಉಷ್ಣಾಂಶ (41.4 ಡಿಗ್ರಿ ಸೆಲ್ಸಿಯಸ್) ಮಂಗಳವಾರ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್ಎನ್ಡಿಎಂಸಿ) ಪ್ರಕಾರ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ತಲಾ 10 ಕಡೆ, ಉಡುಪಿಯ ಎರಡು ಕಡೆ ಹಾಗೂ ಕೊಡಗು ಜಿಲ್ಲೆಯ ಒಂದು ಕಡೆ ಗರಿಷ್ಠ ಉಷ್ಣಾಂಶವು 38 ಡಿಗ್ರಿ ಸೆಲ್ಸಿಯಸ್ನಿಂದ 41 ಡಿಗ್ರಿ ಸೆಲ್ಸಿಯಸ್ವರೆಗೆ ವರದಿಯಾಗಿದೆ. ಉತ್ತರ ಒಳನಾಡಿನಲ್ಲಿ ಮುಂದಿನ ಎರಡು ದಿನಗಳು 2ರಿಂದ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ತಿಳಿಸಿದೆ.














