ಬೆಂಗಳೂರು: ದಕ್ಷಿಣ ಕಬ್ಬಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗೆ
ಶುಕ್ರವಾರ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲ ಸ್ಥಳಗಳಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಶನಿವಾರ ಹೆಚ್ಚುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಕೊಡಗು, ಬೆಂಗಳೂರು ನಗರ ಸೇರಿ ಎಂಟು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಸೇರಿ ಎಂಟು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಇದೇ 20ರವರೆಗೂ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.