ಮಂಗಳೂರು: ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ಮಂಗಳೂರು ರೈಲ್ವೆ ವಿಷಯಗಳ ಕುರಿತಂತೆ ಅಧಿಕಾರಿಗಳು, ಜನಪ್ರತಿನಿಧಿ, ರೈಲು ಬಳಕೆದಾರರ ಸಭೆ ದ.ಕ. ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಬಗ್ಗೆ ಸಾಧಕ ಭಾದಕಗಳ ಕುರಿತಂತೆ ಸಮಗ್ರ ವರದಿ ಸಲ್ಲಿಸುವಂತೆ ಅವರು
ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೊಂಕಣ ರೈಲ್ವೆ ವಿಲೀನ ಕುರಿತಂತೆ ಕೊಂಕಣ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ವಿಭಾಗಗಳ ಹಿರಿಯ ಅಧಿಕಾರಿಗಳ ಸಮಿತಿ ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ರೈಲ್ವೆ ಬಳಕೆದಾರರ ಜತೆ ಚರ್ಚಿಸಿ ತಾಂತ್ರಿಕವಾಗಿ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತಾದ ವರದಿಯನ್ನು ನೀಡಬೇಕು. ಇದಾದ ಬಳಿಕ ಕರಾವಳಿಯಲ್ಲಿ ಕೇಂದ್ರವಾಗಿರಿಸಿ ಪ್ರತ್ಯೇಕ ರೈಲ್ವೆ ವಿಭಾಗ ಆರಂಭಿಸುವ ಕುರಿತು ಯೋಜನೆ ರೂಪಿಸುವಂತೆ ತಿಳಿಸಿದರು.
ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಮಾತನಾಡಿ, ಮಂಗಳೂರಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ರೈಲ್ವೆ ವಿಭಾಗಗಳು ಒಳಗೊಂಡಿರುವುದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದು ಅಗತ್ಯ. ಜತೆಗೆ ಸುರತ್ಕಲ್, ಮುಲ್ಕಿ ರೈಲು ನಿಲ್ದಾಣದ ಜಂಕ್ಷನ್ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ರೋರೋ ಸರ್ವಿಸ್ ಸುರತ್ಕಲ್ನಿಂದ ತೋಕೂರು ಸ್ಟೇಷನ್ಗೆ ಸ್ಥಳಾಂತರಿಸಬೇಕು, ಮಂಗಳೂರಿನಿಂದ ರಾಜ್ಯ ರಾಜಧಾನಿಯನ್ನು ರೈಲಿನಲ್ಲಿ ಸಂಪರ್ಕಿಸಲು ಪ್ರಸಕ್ತ 11 ಗಂಟೆಗಳು ಬೇಕು. ಸಮಯ ಕಡಿತಗೊಳಿಸುವ ಸಲುವಾಗಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲು ಸಾಧ್ಯತೆ ಹಾಗೂ ಆರ್ಥಿಕ ಅಧ್ಯಯನ ಆಗಬೇಕು. ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ರಯಾಣಿಕ ರೈಲು ಪುನರಾರಂಭಿಸಬೇಕು. ಮತ್ಸ್ಯಗಂಧ ರೈಲುಗಳ ಹಳೆ ಕೋಚ್ಗಳನ್ನು ಬದಲಾಯಿಸಬೇಕು ಮತ್ತು ಈ ರೈಲು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ, ಕೊಂಕಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್, ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್. ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇದ್ದರು.