ನವದೆಹಲಿ: ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗುತ್ತಾರಾ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಲೋಕಸಭೆಯ ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಸ್ವೀಕರಿಸುವ ಬಗ್ಗೆ ಹಾಗೂ ಗೆದ್ದಿರುವ 2 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವುದರ ಬಗ್ಗೆ
ರಾಹುಲ್ ಗಾಂಧಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯನ್ನು ತಿಳಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಒಪ್ಪಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಅವರನ್ನು ಸಿಡಬ್ಲ್ಯುಸಿ ಸಭೆಯಲ್ಲಿ ಸರ್ವಾನುಮತದಿಂದ ಒತ್ತಾಯ ಮಾಡಲಾಯಿತು. ಈ ಬಗ್ಗೆ ಶೀಘ್ರವೇ ನಿರ್ಧಾರ ಮಾಡಿ ತಿಳಿಸುವುದಾಗಿ ರಾಹುಲ್ ಗಾಂಧಿ ಸಭೆಯಲ್ಲಿ ಹೇಳಿದರು ಎಂದು ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ (ವಯನಾಡ್ ಹಾಗೂ ರಾಯ್ಬರೇಲಿ) ಯಾವ ಕ್ಷೇತ್ರವನ್ನು ರಾಹುಲ್ ಗಾಂಧಿ ಉಳಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಅವರು 3–4 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.