ಸುಳ್ಯ:ಪಕ್ಷ ಸಂಘಟನೆ ಮಾಡಲು ಯಾವುದೇ ಹುದ್ದೆ ಬೇಕಾಗಿಲ್ಲ, ಹುದ್ದೆ ಇದ್ದರೂ ಇಲ್ಲದೇ ಇದ್ದರೂ ಯುವ ಕಾಂಗ್ರೆಸ್ ಜೊತೆ ಸೇರಿ ಪಕ್ಷ ಸಂಘಟನೆ ಮಾಡಲು ಬದ್ಧನಾಗಿದ್ದೇನೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯದಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ
ನೇಮಕ ಮಾಡಿ, ಅದಕ್ಕೆ ತಾತ್ಕಾಲಿಕ ತಡೆ ನೀಡಿ 10 ತಿಂಗಳಾಗಿದೆ. ತಡೆ ತೆರವು ಮಾಡುವುದು, ಅಧ್ಯಕ್ಷರ ನೇಮಕ ಮಾಡುವುದು ಹೈಕಮಾಂಡ್ಗೆ ಬಿಟ್ಟ ವಿಷಯ.ಆದರೆ 10 ತಿಂಗಳ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕ ಮಾಡಿದ ತಕ್ಷಣದಿಂದ ಪಕ್ಷ ಸಂಘಟನೆಯ ಕೆಲಸ ಆರಂಭಿಸಿದ್ದೇನೆ. ಹುದ್ದೆ ಇದ್ದರೂ ಇಲ್ಲದಿದ್ದರೂ ಯುವ ಕಾಂಗ್ರೆಸ್ ಮಿತ್ರರ ಜೊತೆ ಸೇರಿ ಹಳ್ಳಿ ಹಳ್ಳಿಯಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡುತ್ತೇನೆ. ಆ ಮೂಲಕ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಗುರಿ ಎಂದು ಅವರು ಹೇಳಿದರು.
ಅಧಿಕಾರ, ಹುದ್ದೆ ಇದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಕಡಬದಲ್ಲಿ ಬ್ಲಾಕ್ ಅಧ್ಯಕ್ಷರ ನೇಮಕದ ಬಳಿಕ ಅಲ್ಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ ಎಂದು ಉದಾಹರಿಸಿದ ಅವರು ಸುಳ್ಯದಲ್ಲಿ ಪಕ್ಷ ಕಟ್ಟುವುದು ಮತ್ತು ಚುನಾವಣೆ ಎದುರಿಸುವುದು ಮತ್ತು ಗೆಲ್ಲುವುದು ಅಸಾಧ್ಯ ಏನೂ ಅಲ್ಲ, ಸಮರ್ಥ ನಾಯಕತ್ವ ಮತ್ತು ಸಂಘಟನಾ ಶಕ್ತಿ ಇರುವ ಯುವ ಪಡೆ ಇದ್ದರೆ ಪಕ್ಷ ಮತ್ತೆ ಎದ್ದು ನಿಲ್ಲಬಲ್ಲುದು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.













