ಅಹಮದಾಬಾದ್:ಶಶಾಂಕ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ (ಔಟಾಗದೆ 61; 29ಎ, 4×6, 6×4) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮೂರು ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 199 ರನ್ ಗಳಿಸಿತು. ಪಂಜಾಬ್ 19.5 ಓವರ್ಗಳಲ್ಲಿ
7 ವಿಕೆಟ್ಗೆ 200 ರನ್ ಗಳಿಸಿ ಗೆಲುವಿನ ಗಡಿ ತಲುಪಿತು. ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಆರಂಭ ಉತ್ತಮವಾಗಿರಲಿಲ್ಲ. 70 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಶಿಖರ್ ಧವನ್ (1), ಜಾನಿ ಬೇಸ್ಟೊ (22), ಸ್ಯಾಮ್ ಕರನ್ (5) ಮತ್ತು ಸಿಕಂದರ್ ರಝಾ (15) ಬೇಗನೇ ನಿರ್ಗಮಿಸಿದರು.
ಈ ಹಂತದಲ್ಲಿ ಶಶಾಂಕ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು. ಅವರಿಗೆ ಪ್ರಭಸಿಮ್ರನ್ ಸಿಂಗ್ (35; 24ಎ) ಮತ್ತು ಅಶುತೋಷ್ ಶರ್ಮಾ (31; 17ಎ) ಅವರು ಬೆಂಬಲ ನೀಡಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಶಶಾಂಕ್ ಮತ್ತು ಅಶುತೋಷ್ ಅವರು 22 ಎಸೆತಗಳಲ್ಲಿ 43 ರನ್ ಸೇರಿಸಿದ್ದು, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
ಇದಕ್ಕೂ ಮೊದಲು ಟೈಟನ್ಸ್ ಪರ ನಾಯಕನ ಆಟವಾಡಿದ ಶುಭ್ಮನ್ ಗಿಲ್ ಈ ಆವೃತ್ತಿಯಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು. ಗಿಲ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ಸಾಯಿ ಸುದರ್ಶನ್ (33; 19ಎ) ಅವರೊಂದಿಗೆ 53 ರನ್ ಕಲೆಹಾಕಿದರು. ಗಿಲ್ 48 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ನೆರವಿನಿಂದ ಅಜೇಯ 89 ರನ್ ಬಾರಿಸಿದರು. ರಾಹುಲ್ ತೆವಾಟಿಯಾ ಕೇವಲ 8 ಎಸೆತಗಳಲ್ಲಿ 3 ಬೌಂಡರಿ, ಒಂದು ಸಿಕ್ಸರ್ ಸಹೀತ 23 ರನ್ ಗಳಿಸಿದರು.
ಬಾರಿಸಿದರು. ಪಂಜಾಬ್ ತಂಡಕ್ಕೆ ಈ ಆವೃತ್ತಿಯಲ್ಲಿ ಇದು ಎರಡನೇ ಗೆಲುವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಕಿಂಗ್ಸ್ ತಂಡವು 7ರಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಟೈಟನ್ಸ್ ತಂಡವು ಐದನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿತು.