ಸುಳ್ಯ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ಅಲ್ಲದೇ ಎಂ.ಎಸ್.ಸ್ವಾಮೀನಾಥನ್ ವರದಿಯನ್ನು ಕೇಂದ್ರ ಸರಕಾರ ಕೂಡಲೇ ಜಾರಿಗೆ ಮಾಡಬೇಕು ಎಂದು ಸುಳ್ಯದ ರೈತ ಮುಖಂಡರು ಆಗ್ರಹಿಸಿದ್ದಾರೆ.ದೆಹಲಿಯಲ್ಲಿ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬೃಹತ್ ಹೋರಾಟ ದಿಲ್ಲಿ ಚಲೋ ಅಂಗವಾಗಿ ರೈತರು ಮತ್ತು ಕಾರ್ಮಿಕರು ಕರೆ ಕೊಟ್ಟಿರುವ ದೇಶದಾದ್ಯಂತ ಗ್ರಾಮೀಣ ಭಾರತ್ ಬಂದ್ಗೆ ಬೆಂಬಲವಾಗಿ ಸುಳ್ಯದ ಸಮಾನ ಮನಸ್ಕ ರೈತಪರ ಹೋರಾಟಗಾರರು ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಸುಳ್ಯದ
ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಒತ್ತಾಯಿಸಿದರು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಮುಖಂಡ ಅಶೋಕ್ ಎಡಮಲೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಅಲ್ಲದೇ ಕೃಷಿ ತಜ್ಞ ಎಂ.ಎಸ್. ಸ್ವಾಮೀನಾಥನ್ ವರದಿಯನ್ನು ಅನುಷ್ಠಾನ ಮಾಡಬೇಕು ಎಂದು ಹೇಳಿದರು. ದೇಶದ ಅಭಿವೃದ್ದಿಯಲ್ಲಿ ರೈತರ ಕೊಡುಗೆ ಬಹಳಷ್ಟಿದೆ. ಆದರೆ ಮೋದಿ ಸರಕಾರ ರೈತರನ್ನು ಕಡೆಗಣಿಸಿದೆ ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಾಜಾಕ್ಷ ಭೂತಕಲ್ಲು ಮಾತನಾಡಿ ರೈತರ ಉತ್ಪನ್ನಗಳ ಬೆಲೆ ಬದಲಾಗಿ ಬೆಲೆಗಳು ಪಾತಾಳಕ್ಕೆ ಕುಸಿದಿದೆ. ಕೃಷಿ ಕಾಯಿದೆಗಳು ರೈತರಿಗೆ ಮಾರಕವಾಗಿ ಪರಿಣಮಿಸಿದೆ. ರಾಜ್ಯದ ಸಂಸದರು ಯಾರು ಕೂಡ ಲೋಕಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮುಖಂಡರಾದ ಕೆ.ಪಿ.ಜಾನಿ, ಎಂ. ವೆಂಕಪ್ಪ ಗೌಡ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಪಿ.ಎಸ್.ಗಂಗಾಧರ್, ದಿವಾಕರ ಪೈ, ಭರತ್ ಕುಮಾರ್, ಸುರೇಶ್ ಅಮೈ, ಗೋಕುಲ್ ದಾಸ್, ಕೆ.ಎಂ.ಮುಸ್ತಫ, ನೂಜಾಲು ಪದ್ಮನಾಭ, ನಂದರಾಜ್ ಸಂಕೇಶ, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಮಹಮ್ಮದ್ ಕುಂಞಿ ಗೂನಡ್ಕ, ಡೇವಿಡ್ ಧೀರಾ ಕ್ರಾಸ್ತ, ದಿನೇಶ್ ಸರಸ್ವತಿ ಮಹಲ್, ಕೃಷ್ಣ ಭಟ್ ಮುಂಡಕಜೆ, ಬೋಜಪ್ಪ ನಾಯ್ಕ್ ಅಡ್ಕಾರ್, ಚೇತನ್ ಕಜೆಗದ್ದೆ, ರೋಹನ್ ಪೀಟರ್, ಸಿದ್ದಿಕ್ ಕೊಕ್ಕೊ, ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ ಮೊದಲಾದವರು ಇದ್ದರು.









