ಸುಳ್ಯ:ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ. ಸುಳ್ಯದಂತಹಾ ಗ್ರಾಮೀಣ ಭಾಗದಿಂದ ರಾಜಕೀಯ ಜೀವನ ಆರಂಭಿಸಿ ರಾಜ್ಯ, ರಾಷ್ಟ್ರಮಟ್ಟದವರೆಗೆ ಬೆಳೆದ, ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳಾಗಿ ಮಿಂಚಿದ್ದ
ಸುಳ್ಯ ದೇವರಗುಂಡದವರಾದ ಡಿ.ವಿ.ಸದಾನಂದ ಗೌಡರ ರಾಜಕೀಯ ನಡೆಯ ಬಗ್ಗೆ ಸುಳ್ಯದಲ್ಲಿಯೂ ಭಾರೀ ಕುತೂಹಲ ಕೆರಳಿಸಿದೆ. ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಸೀಟು ಕೈ ತಪ್ಪಿರುವ ಕಾರಣ
ಮುನಿಸಿಕೊಂಡಿರುವ ಸದಾನಂದ ಗೌಡರು ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆಗಿನ ನಿರ್ಧಾರ ಇಂದು ಘೋಷಣೆ ಮಾಡುವುದಾಗಿ ತಿಳಿಸಿದ್ದರು.ಆದರೆ ಇಂದು ಬೆಳಿಗ್ಗೆ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ. ತನ್ನ ಕುಟುಂಬದ ಸದಸ್ಯರು ಹಾಗೂ ಆಪ್ತ ವಲಯದ ಜೊತೆ ಚರ್ಚೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದ್ದರು. ದೇವರಗುಂಡದ ಕುಟುಂಬದ ಪ್ರಮುಖರ ಜೊತೆಗೂ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.ಪ್ರಮುಖರ ಅಭಿಪ್ರಾಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಅಭ್ಯರ್ಥಿ ಅಥವಾ ಪಕ್ಷೇತರ..?
ಡಿ.ವಿ.ಸದಾನಂದ ಗೌಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಹರಿದಾಡುತ್ತಾ ಇದೆ. ಕಾಂಗ್ರೆಸ್ನಿಂದ ಕರೆ ಬಂದಿದೆ ಎಂದು ಸ್ವತಹಾ ಸದಾನಂದ ಗೌಡರೇ ಒಪ್ಪಿಕೊಂಡಿದ್ದರು. ಆದರೆ ಅವರ ನಿರ್ಧಾರ ಮಾತ್ರ ಇನ್ನೂ ಅಂತಿಮವಾಗಿಲ್ಲ. ಮೈಸೂರು-ಕೊಡಗು ಕ್ಷೇತ್ರ, ಉಡುಪಿ- ಚಿಕ್ಕಮಗಳೂರು ಕ್ಷೇತ್ರ, ಚಿಕ್ಕಬಳ್ಳಾಪುರ ಕ್ಷೇತ್ರ ಹೀಗೆ ಯಾವುದಾದರು ಒಂದು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ. ಡಿ.ವಿ.ಸದಾನಂದ ಗೌಡರು ಕಾಂಗ್ರೆಸ್ ಸೇರ್ಪಡೆ ಆಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆಯೂ ಇದೆ ಎಂದು ಕೆಲವು ಮೂಲಗಳು ಹೇಳಿವೆ.ಒಟ್ಟಿನಲ್ಲಿ ಸದಾನಂದ ಗೌಡರು ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧೆ ಮಾಡುತ್ತಾರಾ, ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ ಅಥವಾ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಾರಾ ಎಂಬ ಕುತೂಹಲ ಇದೆ.

ಮತ್ತೆ ಸ್ಪರ್ಧೆ ಯಾಕೆ.?
ಡಿವಿಎಸ್ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಇಲ್ಲಾ ಎಂಬ ಸೂಚನೆ ಹಿಂದೆಯೇ ನೀಡಿದ್ದರು. ಕೆಲವು ಸಮಯದ ಹಿಂದೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನೂ ಘೋಷಿಸಿದ್ದರು. ಆದರೆ ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ರಾಜ್ಯದ ಕೆಲವು ಮುಖಂಡರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಪ್ರಮುಖರು, ಕಾರ್ಯಕರ್ತರು ಹಾಗೂ ಅವರ ಆಪ್ತ ವಲಯದಿಂದ ಮತ್ತೊಂದು ಬಾರಿ ಡಿವಿ ಅವರೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಗೌಡರ ಮೇಲೆ ಒತ್ತಡ ಹೇರಿದ್ದರು. ಇದರಿಂದ ನಿಲುವು ಬದಲಿಸಿದ ಅವರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಘೋಷಣೆಯಾದಾಗ ಅವರಿಗೆ ಟಿಕೆಟ್ ಕೈತಪ್ಪಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಅವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.
ಸುಳ್ಯದಿಂದ ದಿಲ್ಲಿವರೆಗೆ ಬೆಳೆದ ನಾಯಕ:
ಸುಳ್ಯದಲ್ಲಿ ರಾಜಕೀಯ ಜೀವನ ಆರಂಭಿಸಿ ಹಳ್ಳಿಯಿಂದ ದಿಲ್ಲಿವರೆಗೆ ಬೆಳೆದು ರಾಜಕೀಯ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದವರು ಸದಾನಂದ ಗೌಡರು. ಸುಳ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಸಹಕಾರಿ ಕ್ಷೇತ್ರದಲ್ಲಿ ಸಕ್ರೀಯರಾಗಿ ಎರಡು ಬಾರಿ ಪುತ್ತೂರು ಶಾಸಕರಾಗಿ, ಮಂಗಳೂರು ಲೋಕಸಭಾ ಕ್ಷೇತ್ರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಮುಖ್ಯಮಂತ್ರಿಯಾಗಿ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಜೀವನದ ಉತ್ತುಂಗ ಏರಿದ್ದ ಸದಾನಂದ ಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಎಂಪಿಯಾಗಿ 7 ವರ್ಷಗಳ ಕಾಲ ಕೇಂದ್ರ ಸಚಿವರಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಷ್ಟೀಯ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.









