*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು ಮತದಾನ ನಡೆಯಲಿದ್ದು ಏ.24ರಂದು ಸಂಜೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
ನೆತ್ತಿ ಸುಡುವ ಬಿಸಿಲಿನ ಝಳ ಮತ್ತು ಏರಿದ ಸೇಕೆಯ ಬೇಗೆಯನ್ನು ಮೀರಿಸಿದ ಚುನಾವಣಾ ಕಾವು ಎಲ್ಲೆಡೆ ಕಂಡು ಬಂದಿತ್ತು. ಅಬ್ಬರದ ಪ್ರಚಾರ, ರಂಗು ರಂಗಿನ ಪ್ರಚಾರದ ಭರಾಟೆ ಕಡಿಮೆ ಇದ್ದು ಪ್ರಚಾರ ಸ್ವಲ್ಪ ‘ಸಪ್ಪೆ’ ಅನ್ನಿಸಿದರೂ ಮತದಾರರನ್ನು ಓಲೈಸುವ ನಿಶ್ಯಬ್ದ ಪ್ರಚಾರ, ಮತದಾರನ ಮನೆ, ಮನ ಮುಟ್ಟುವ ಪ್ರಚಾರ ಸಾಕಷ್ಟು ಬಿರುಸಿನಿಂದ
ಕೂಡಿತ್ತು. ಇನ್ನೀಗ ಮತದಾರನ ತೀರ್ಪು ನೀಡುವ ಮತದಾನಕ್ಕೆ ಗಂಟೆಗಳು ಮತ್ರ ಬಾಕಿ ಉಳಿದಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಮತ್ತು ಪಕ್ಷೇತರ ಸೇರಿ 9 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಹಾಗೂ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಾದ್ಯಂತ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆಯೇ ಜಿದ್ದಾಜಿದ್ದಿ. ಈ ಬಾರಿ ಎರಡೂ ಪಕ್ಷಗಳು ಬಿರುಸಿನ ಪ್ರಚಾರವನ್ನೇ ಕೈಗೊಂಡಿದೆ. ಎರಡೂ ಪಕ್ಷಗಳು ಎರಡು ಹಂತದಲ್ಲಿ ಮನೆ ಮನೆ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಎರಡೂ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿದಂತೆ ಕ್ಷೇತ್ರದಾದ್ಯಂತ ಓಡಾಡಿ ಹಲವು ಸುತ್ತಿನ ಪ್ರಚಾರ ಕೈಗೊಂಡಿದ್ದಾರೆ. ರೋಡ್ ಶೋ, ಪ್ರಚಾರ ಸಭೆ, ಕಾರ್ನರ್ ಮೀಟಿಂಗ್, ಮತದಾರರ ಭೇಟಿ ಮೂಲಕ ಅಭ್ಯರ್ಥಿಗಳು ಪ್ರಚಾರದಲ್ಲಿ ಲೈವ್ ಆಗಿದ್ದರು.
ಪದ್ಮರಾಜ್ ಆರ್.ಪೂಜಾರಿ
ದೊಡ್ಡ ಮಟ್ಟದ ಬಹಿರಂಗ ಸಭೆ ಸಮಾರಂಭಕ್ಕಿಂತ ಈ ಬಾರಿ ಮನೆ ಮನೆ ಭೇಟಿಗೆ, ಕಾರ್ನರ್ ಮೀಟಿಂಗ್, ರೋಡ್ಶೋಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಬಿಸಿಲ ಬೇಗೆ, ಏರಿದ ಸೆಕೆಯನ್ನೂ ಲೆಕ್ಕಿಸದೇ ನಾಯಕರು, ಕಾರ್ಯಕರ್ತರು ಹಳ್ಳಿ, ಹಳ್ಳಿ ಮನೆ ಮನೆ ಸುತ್ತಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬ್ರಿಜೇಶ್ ಚೌಟ ದ.ಕ.ಕ್ಷೇತ್ರದಿಂದ ಆಯ್ಕೆಯಾಗುವುದು ಖಚಿತ ಎಂದು ಬಿಜೆಪಿ ನಾಯಕರು ಹೇಳಿದ್ದರೆ, 33 ವರ್ಷಗಳ ಬಳಿಕ ಪದ್ಮರಾಜ್ ಆರ್ ಪೂಜಾರಿ ಮೂಲಕ ಸೋಲಿನ ಸರಪಳಿಯನ್ನು ತುಂಡರಿಸಿ ಕಾಂಗ್ರೆಸ್ ಪ್ರತಿನಿಧಿ ಲೋಕಸಭೆ ಪ್ರವೇಶಿಸಲಿದೆ ಎಂದು ಕಾಂಗ್ರೆಸ್ ನಂಬಿಕೆ. ಜಿಲ್ಲೆಯಲ್ಲಿ ಕೆಲವು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿ ಇಲ್ಲ. ಜೆಡಿಎಸ್ ಬಿಜೆಪಿ ನೇತೃತ್ವದ ಎನ್ಡಿಎ ಪಾಳಯದಲ್ಲಿ ಇದ್ದರೆ , ಆಮ್ ಆದ್ಮಿ ಪಾರ್ಟಿ, ಸಿಪಿಐಎಂ ಪಕ್ಷಗಳು ಇಂಡಿಯಾ ಒಕ್ಕೂಟದಲ್ಲಿದ್ದು ಕಾಂಗ್ರೆಸ್ಗೆ ಬೆಂಬಲ ನೀಡಲಿದೆ. ಎಸ್ಡಿಪಿಐ ಅಭ್ಯರ್ಥಿ ಇಳಿಸಿಲ್ಲ.
ಜಿಲ್ಲೆಯ ಅಭಿವೃದ್ಧಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳು, ಜಾತಿ, ಧರ್ಮ, ಹಿಂದುತ್ವ ಹೀಗೆ ಹಲವು ವಿಷಯಗಳು ದ.ಕ.ಕ್ಷೇತ್ರದ ಚುನಾವಣಾ ಪ್ರಚಾರ ಕಣದಲ್ಲಿ ಸಕ್ರೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಹು ಚರ್ಚಿತ ವಿಷಯಗಳು ಚುನಾವಣೆಯಲ್ಲಿ ಹೇಗೆ ಪ್ರತಿಫಲಿಸಲಿದೆ, ಮತದಾರನ ಒಲವು ಯಾರ ಕಡೆ ಎಂಬುದು ಮಾತ್ರ ಕಾದು ನೋಡಬೇಕಾಗಿದೆ.
ಕ್ಯಾಪ್ಟನ್ ಬ್ರಿಜೇಶ್ ಚೌಟ
ಬಿಜೆಪಿಗೆ ಮೋದಿ ಅಲೆಯ ಬಲ:
ಮೂರು ಬಾರಿ ಧನಂಜಯಕುಮಾರ್, ಒಂದು ಬಾರಿ ಡಿ.ವಿ.ಸದಾನಂದ ಗೌಡ, 3 ಬಾರಿ ನಳಿನ್ ಕುಮಾರ್ ಕಟೀಲ್ ಜಯಭೇರಿ ಭಾರಿಸಿರುವ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿಯ ಗೆಲುವಿನ ರಥವನ್ನು ಈ ಬಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಂದುವರಿಸಲಿದ್ದಾರೆ ಎಂಬುದು ಬಿಜೆಪಿಯ ಲೆಕ್ಕಾಚಾರ. ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಮತ್ತೊಮ್ಮೆ ಗೆಲುವಿನ ಭರವಸೆ ಇಟ್ಟಿರುವ ಜಿಲ್ಲೆಯ ಬಿಜೆಪಿ ಕೇಂದ್ರ ಸರಕಾರದ ಸಾಧನೆ,ಒಂದಷ್ಟು ಹಿಂದುತ್ವದ ಮತಗಳನ್ನು ನೆಚ್ಚಿಕೊಂಡಿದ್ದು ಗೆಲುವಿನ ನಿರೀಕ್ಷೆಯಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಮಂಗಳೂರಿಗೆ ಆಗಮಿಸಿ ರೋಡ್ ಶೋ ನಡೆಸಿ ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ. ಅಭ್ಯರ್ಥಿ ಘೋಷಣೆಯಾದಂದಿನಿಂದ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ನಾಯಕರು ನಿರಂತರ ಪ್ರಚಾರ ಕಾರ್ಯದಲ್ಲಿ ಬಿಝಿ ಆಗಿದ್ದರು.
ಕಾಂಗ್ರೆಸ್ಗೆ ಗ್ಯಾರಂಟಿ ಬಲ:
ಕಳೆದ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳು ತಮಗೆ ಮತಗಳಾಗಿ ಪರಿವರ್ತನೆ ಆಗಲಿದೆ ಎಂದು ಕಾಂಗ್ರೆಸ್ ನಂಬಿದೆ. ಆದುದರಿಂದಲೇ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಗ್ಯಾರಂಟಿ ಸಾಕಷ್ಟು ಅಲೆ ಎಬ್ಬಿಸಿತು. ಈ ಬಾರಿ ಕಾಂಗ್ರೆಸ್ ಕೂಡ ಮನೆ ಮನೆ ಭೇಟಿಗೆ ಒತ್ತು ನೀಡಿ ಪ್ರಚಾರ ನಡೆಸಿದೆ. ಗ್ಯಾರಂಟಿ ಯೋಜನೆಗಳು ಮನೆ ಮನೆ ತಲುಪಿದ ಕಾರಣ ಜನರು ಮತ ನೀಡಲಿದ್ದಾರೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಅಭ್ಯರ್ಥಿ ಪದ್ಮರಾಜ್ ಪೂಜಾರಿ ಕ್ಷೇತ್ರದ ಮೂಲೆ ಮೂಲೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೊತೆಗೆ ರಾಜ್ಯಮಟ್ಟದ ಹಲವು ಮಂದಿ ನಾಯಕರು ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ರಂಜಿನಿ ಎಂ. ಚುನಾವಣಾ ಪ್ರಚಾರದಲ್ಲಿ ಸಕ್ರೀಯರಾಗಿದ್ದರು. ವಿವಿಧ ಕಡೆ ಪ್ರಚಾರ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿಯ ಅಜೆಂಡಾ ಮುಂದಿಟ್ಟಿದ್ದಾರೆ.
ಸುಳ್ಯ ಕ್ಷೇತ್ರದ ಬಹುಮತ ನಿರ್ಣಾಯಕ:
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಸೋಲು ಗೆಲುವಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆಯುವ ಬಹುಮತ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದು ಹಿಂದಿನಿಂದಲೂ ಇರುವ ಲೆಕ್ಕಾಚಾರ.ಈ ಹಿಂದಿನ ಚುನಾವಣೆಗಳಲ್ಲಿ
ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ ಉತ್ತಮ ಬಹುಮತ ಬಂದಿತ್ತು.ಈ ಬಾರಿಯೂ ಬಿಜೆಪಿ ಸುಳ್ಯ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬಹುಮತ ಪಡೆಯುವ ನಿಟ್ಟಿನಲ್ಲಿ ಪ್ರಚಾರದ ಮೂಲಕ ಪ್ರಯತ್ನ ನಡೆಸಿದ್ದೇವೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಬಹುಮತ ಕಡಿಮೆ ಮಾಡುವುದರ ಜೊತೆಗೆ ಬಿಜೆಪಿಗೆ ಸಮಾನವಾದ ರೀತಿಯಲ್ಲಿ ಕಾಂಗ್ರೆಸ್ ಕೂಡ ಮತ ಪಡೆಯುವ ರೀತಿಯಲ್ಲಿ ಈ ಬಾರಿ ಪ್ರಚಾರ ತಂತ್ರವನ್ನು ರೂಪಿಸಲಾಗಿತ್ತು. ಆದುದರಿಂದ ಬಿಜೆಪಿ ಕಡಿಮೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಜಾತಿ ಲೆಕ್ಕಾಚಾರ:
ಪ್ರತಿ ಚುನಾವಣೆಯಲ್ಲಿಯೂ ಕ್ಷೇತ್ರದಲ್ಲಿ ಜಾತಿ ಮತಗಳ ಲೆಕ್ಕಾಚಾರವೂ ನಡೆಯುತಿದೆ. ಈ ಬಾರಿಯೂ ವಿವಿಧ ಜಾತಿ ಧರ್ಮಗಳ ಮತಗಳ ಮೇಲೆ ಪಕ್ಷಗಳು ಕಣ್ಣಿಟ್ಟಿದ್ದು ಈ ಕುರಿತ ಚರ್ಚೆಯೂ ಗರಿಗೆದರಿತ್ತು. ಜಿಲ್ಲೆಯಲ್ಲಿ ಅತೀ ಹೆಚ್ಚು ಇರುವ ವಿವಿಧ ಜಾತಿಗಳ, ಪ್ರಬಲ ಸಮುದಾಯಗಳ ಮತಗಳು ಯಾವ ರೀತಿ ಹಂಚಿ ಹೋಗಲಿದೆ ಎಂಬುದು ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ನಿರ್ಣಾಯಕವಾಗಲಿದೆ ಎಂದು ಹೇಳಲಾಗುತಿದೆ.
ನೋಟಾ ಅಭಿಯಾನ:
ಸೌಜನ್ಯ ನ್ಯಾಯಕ್ಕಾಗಿನ ಹೋರಾಟ ಸಮಿತಿ ಈ ಬಾರಿ ನೋಟಾ ಅಭಿಯಾನ ನಡೆಸಿದ್ದು ಸಂಚಲನ ಮೂಡಿಸಿದೆ.ನೋಟಾ ಅಭಿಯಾನ ಈ ಬಾರಿಯ ಚುನಾವಣಾ ಕಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎಷ್ಟು ಮತ ನೋಟಾ ಪಾಲಾಗಲಿದೆ. ಅದು ಯಾವ ಪಕ್ಷಕ್ಕೆ ಲಾಭ, ಯಾವ ಪಕ್ಷಕ್ಕೆ ನಷ್ಟ ಎಂಬಿತ್ಯಾದಿ ಚರ್ಚೆಗಳು ಗರಿ ಗೆದರಿತ್ತು.
ಒಟ್ಟಿನಲ್ಲಿ ಕಳೆದ ಎರಡು ತಿಂಗಳ ಕಾಲ ನಡೆದ ಚುನಾವಣೆಯ ಬಿರುಸಿನ ಪ್ರಚಾರಕ್ಕೆ ತೆರೆ ಬಿದ್ದಿದೆ. ಇನ್ನು ಮತದಾರ ಯಾವ ರೀತಿಯ ತೀರ್ಪು ನೀಡಲಿದೆ ಎಂಬುದು ಕಾದು ನೋಡಬೇಕಾಗಿದೆ.