ಪೆರುವಾಜೆ: ಪೆರುವಾಜೆಯ ಡಾ.ಕೆ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 32ನೇ ವಾರ್ಷಿಕೋತ್ಸವು ಜರುಗಿತು. ಕಾಲೇಜು ವಾರ್ಷಿಕೋತ್ಸವದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ್ ನೆರವೇರಿಸಿ, ವಿದ್ಯಾರ್ಥಿಗಳು ಬದುಕಿನಲ್ಲಿ ಭರವಸೆಯನ್ನು ಹೊಂದಿರಬೇಕು, ಕೃಷಿಯಲ್ಲಿ ಆಸಕ್ತಿಯನ್ನು
ಬೆಳೆಸಿಕೊಳ್ಳುವುದು ಮುಖ್ಯ ಹಾಗೆಯೇ ಪರಿಸರದ ಕುರಿತು ಕಾಳಜಿ ಹೊಂದಿದಾಗ ಮಾತ್ರ ಭಾರತವು ಬಲಿಷ್ಠವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಚೇತನ ಸೋಮೇಶ್ವರ ಮಾತನಾಡಿ ವಿದ್ಯಾರ್ಥಿಗಳು ಪಠ್ಯದಾಚೆಗಿನ ಓದು ಮತ್ತು ಪೂರಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದರಿಂದ ಅವರ ವ್ಯಕ್ತಿತ್ವವು ಸಮರ್ಪಕವಾಗಿ ರೂಪುಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಾಮೋದರ ಕಣಜಾಲು ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ಗುತ್ತಿಗಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚೆನ್ನಮ್ಮ,ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರವಿಕುಮಾರ್ ಕಿರಿಭಾಗ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಯತೀಶ್ ಕುಮಾರ್ ಎಂ, ವಿದ್ಯಾರ್ಥಿ ಕ್ಷೇಮಪಾಲಕರಾದ ಕಾಂತರಾಜು ಸಿ ಮತ್ತು ವಿಭಾಗವಾರು ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಧನುಷ್, ಕೃತಿಕಾ, ಶಿಲ್ಪ, ನಿತಿನ್ ಮತ್ತು ಧನ್ಯಶ್ರೀ ಇದ್ದರು.ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮತ್ತು ದತ್ತಿನಿಧಿ ವಿದ್ಯಾರ್ಥಿ ವೇತನಗಳನ್ನು ವಿತರಣೆ ಮಾಡಲಾಯಿತು.
ಧನ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಲಿಖಿತ ಮತ್ತು ತಂಡದವರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಕೆ, ಅಧ್ಯಾಪಕರಾದ ರಶ್ಮಿಕಾ ಕರ್ಕೇರಾ, ಹರ್ಷಿತಾ, ವಿನುತ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು.









