ಸುಳ್ಯ: ಬಿಸಿಲ ಬೇಗೆ ದಿನೇ ದಿನೇ ಏರುತ್ತಿದ್ದರೆ ಉಷ್ಣಾಂಶ 40 ಡಿಗ್ರಿ ಸುತ್ತ ಗಿರಕಿ ಹೊಡೆಯುತಿದೆ. ಮಳೆರಾಯ ಸುರಿಯದೇ ಮರೆಯಾಗಿದೆ. ಉರಿ ಬೇಸಿಗೆಯ ತಾಪಕ್ಕೆ ನೀರಿನ ಮೂಲಗಳು ಒಂದೊಂದೇ ಬತ್ತಿ ಬರಡಾಗುತಿದೆ. ಮಲೆನಾಡ ತಪ್ಪಲ ಸುಳ್ಯದಲ್ಲಿಯೂ ನೀರಿನ ಅಭಾವದ ಆತಂಕ ಎದುರಾಗಿದೆ. ಸುಳ್ಯ ಹಾಗೂ ಕಾಸರಗೋಡಿನ ಜನರ ಜೀವ ನದಿ ಪಯಸ್ವಿನಿ ನದಿ ಬತ್ತಿ ಬರಡಾಗುತಿದೆ. ಕಲ್ಲುಮುಟ್ಲುವಿನಲ್ಲಿ

ಗಡಿಭಾಗದಲ್ಲಿ ಹರಿವು ನಿಲ್ಲಿಸಿ ಬರಡಾಗಿರುವ ಪಯಸ್ವಿನಿ
ಡ್ಯಾಂ ನಿರ್ಮಾಣ ಆದ ಕಾರಣ ಡ್ಯಾಂ ನಲ್ಲಿ ನೀರಿದೆ. ಇದರಿಂದ ನಗರಕ್ಲೆ ಕುಡಿಯುವ ನೀರಿನ ಬವಣೆ ತಪ್ಪಿದೆ. ಡ್ಯಾಂ ನಿರ್ಮಾಣ ಆದ ಕಾರಣ ಕಲ್ಲುಮುಟ್ಲುವಿನ ಮೇಲಿನ ಭಾಗದಲ್ಲಿ ಕೆಲವು ಕಡೆ ನೀರು ಇದೆ. ಆದರೆ ಕೆಳ ಭಾಗದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಹಲವು ಕಡೆ ನದಿ ನೀರಿನ ಹರಿವು ನಿಲ್ಲಿಸಿದೆ. ಅಲ್ಲಲ್ಲಿ ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಉಳಿದಿದೆ. ಓಡಬಾಯಿ, ಅಡ್ಕಾರು, ಪಂಜಿಕಲ್ಲು, ಮುರೂರು ಸೇರಿದಂತೆ ವಿವಿಧ ಕಡೆಗಳಲ್ಲಿ ನೀರು ಹರಿವು ನಿಲ್ಲಿಸಿದೆ. ಗಡಿ ಭಾಗವಾದ ಪಂಜಿಕಲ್ಲಿನಲ್ಲಿ ಹಲವು ಕಡೆ ನದಿ ಪಾತ್ರ ಸಂಪೂರ್ಣ ಬತ್ತಿ ಮರುಭೂಮಿಯಂತಾಗಿದೆ. ಹಲವಾರು ಮೀಟರ್ ದೂರಕ್ಕೆ ಒಂದು ಹನಿಯೂ ನೀರಿಲ್ಲದೆ ಬತ್ತಿ ಬರಡಾಗಿ ರೋಡಿನಂತಾಗಿದೆ. ಅಲ್ಲಲ್ಲಿ ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಇದೆ.

ಮಳೆ ಬರುವುದು ಇನ್ನಷ್ಟು ತಡವಾದರೆ ಪಯಸ್ವಿನಿಯಲ್ಲಿ ನೀರಿನ ಹರಿವು ಇನ್ನಷ್ಟು ಕಡಿಮೆಯಾಗುವ ಆತಂಕ ಇದೆ. ಇದರಿಂದ ಕುಡಿಯುವ ನೀರಿಗೆ, ಕೃಷಿಗೆ ನೀರು ಹಾಯಿಸುವುದಕ್ಕೆ ಸಮಸ್ಯೆ ಎದುರಾಗುವುದರ ಜೊತೆಗೆ ನದಿಯಲ್ಲಿನ ಜಲಚರಗಳಿಗೂ ಕಂಠಕವಾಗುವ ಸಾಧ್ಯತೆ ಇದೆ. ಕೆಲವು ವರ್ಷಗಳ ಹಿಂದೆ ಪಯಸ್ವಿನಿ ನದಿ ಸಂಪೂರ್ಣ ಬತ್ತಿ ಹೋಗಿ ಜಲಚರಗಳ ಮಾರಣ ಹೋಮವೇ ಸಂಭವಿಸಿತ್ತು. ಸಾವಿರಾರು ಮೀನುಗಳು ನೀರಿಲ್ಲದೆ ಸತ್ತು ಹೋಗಿದ್ದವು. 2016, 2023 ವರ್ಷಗಳ ಬೇಸಿಗೆಯಲ್ಲಿ ನೀರು ಕಡಿಮೆಯಾಗಿ ಮೀನುಗಳು ಸತ್ತು ಹೋಗಿದ್ದವು.

ಎಲ್ಲೆಡೆ ಇಳಿದ ನೀರಿನಮಟ್ಟ:
ಮಾರ್ಚ್ ತಿಂಗಳು ಪೂರ್ತಿ ಮತ್ತು ಏಪ್ರಿಲ್ ತಿಂಗಳು ಅರ್ಧವಾಗುತ್ತಾ ಬಂದರೂ ಒಂದು ಮಳೆಯೂ ಬಾರದೇ ಇರುವುದು ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ನೀರಿನ ಮೂಲಗಳು ಬತ್ತುತ್ತಿವೆ. ನದಿ. ತೋಡು, ಹಳ್ಳ ಕೊಳ್ಳಗಳು. ಕೆರೆ, ಬಾವಿಗಳ ನೀರಿನ ಮಟ್ಟ ಪಾತಾಳಕ್ಕೆ ಇಳಿದಿದೆ. ಹಲವೆಡೆ ಕೆರೆ, ಬಾವಿಗಳು ಬತ್ತಿ ಹೋಗಿದ್ದು, ಕೊಳವೆ ಬಾವಿಗಳಲ್ಲಿಯೂ ನೀರಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ಕೃಷಿಗೆ ಹಾಯಿಸಲು ನೀರಿಲ್ಲದ ಸ್ಥಿತಿ ನಿರ್ಮಾಣ ಆಗಿದೆ.










